'ಕಾಂಗ್ರೆಸ್ ಯೋಜನೆಗಳಿಗೆ ಮರು ನಾಮಕರಣ ಮಾಡುತ್ತಿರುವ ಬಿಜೆಪಿ ಸರಕಾರ': ಪರಿಷತ್ತಿನಲ್ಲಿ ಜಟಾಪಟಿ

ಬೆಂಗಳೂರು, ಫೆ. 22: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಮರು ನಾಮಕರಣ ಮಾಡಿ ಮುಂಗಡ ಪತ್ರದಲ್ಲಿ ಪ್ರಕಟಿಸಲಾಗಿದೆ ಎನ್ನುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಆಡಳಿತದ ಪಕ್ಷದ ಸದಸ್ಯರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಮೇಲ್ಮನೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ, ಗದ್ದಲ ಉಂಟಾಯಿತು.
ಬುಧವಾರ ವಿಧಾನ ಪರಿಷತ್ತಿನಲ್ಲಿ 2023-24ನೆ ಸಾಲಿನ ಮುಂಗಡ ಪತ್ರದ ಕುರಿತು ಪ್ರಸ್ತಾಪಿಸಿದ ಹರಿಪ್ರಸಾದ್, ಬಿಜೆಪಿ ಸರಕಾರ ಹೊಸ ಯೋಜನೆಗಳನ್ನು ಪ್ರಕಟಿಸದೆ ಹಳೆಯೋಜನೆಗಳಿಗೆ ಮರುನಾಮಕರಣ ಮಾಡುತ್ತಿದೆ ಎಂದು ಟೀಕಿಸಿದರು.ಈ ವೇಳೆ ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿ ಆಕ್ಷೇಪಿಸಿದರು.
ಬಳಿಕ ಸಭಾನಾಯಕರ ಬೆಂಬಲಕ್ಕೆ ಸಚಿವ ಪಿ.ಸಿ.ಪಾಟೀಲ್ ಧಾವಿಸಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವ ಮತ್ತೆ ಮಾತಿನ ಚಕಮಕಿ ಗದ್ದಲ ಕೋಲಾಹಲ ನಡೆಯಿತು.
ಬಜೆಟ್ ಮೇಲೆ ಮತ್ತೆ ಮಾತು ಮುಂದುವರಿಸಿದ ಹರಿಪ್ರಸಾದ್, ಬಿಜೆಪಿ ಸರಕಾರ ಹೊಸ ಯೋಜನೆಗಳನ್ನು ಪ್ರಕಟಿಸದೆ ಲವ್ ಜಿಹಾದ್, ಟಿಪ್ಪುಸುಲ್ತಾನ್, ಸಾವರ್ಕರ್, ಸ್ಮಶಾನ, ಖಬರ್‍ಸ್ತಾನ್, ಘರ್ ವಾಪಸಿ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಗೊಂದಲ ಅಶಾಂತಿ ಮೂಡಿಸಲು ಮುಂದಾಗಿದೆ ಎಂದು ದೂರಿದರು.
ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಮುಂದಾದ ಸಚಿವ ಸಿ.ಸಿ.ಪಾಟೀಲ್, ಸುಳ್ಳು ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಬೇಡಿ ಎಂದು ಆಕ್ಷೇಪಿಸಿದರು. ಆಗ ಕೆಂಡಾಮಂಡಲವಾದ ಹರಿಪ್ರಸಾದ್ ವಿಧಾನಸೌಧದಲ್ಲಿ ನಿಮ್ಮ ಕಚೇರಿಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ 10 ಲಕ್ಷ ರೂ. ತಂದದ್ದು ಸುಳ್ಳಾ, ನಮ್ಮನ್ನು ಸುಳ್ಳು ಹೇಳಿಕೆ ನೀಡುತ್ತಿದ್ದೀರಿಎನ್ನುತ್ತೀರಿ ನೀವೇನು ಸತ್ಯಹರಿಶ್ಚಂದ್ರರ ಎನ್ನುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪುನಃ ಮಾತಿನ ಚಕಮಕಿ ನಡೆಯಿತು.
ಆನಂತರ ಹರಿಪ್ರಸಾದ್, ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡಜನರಿಗೆ ಅನುಕೂಲವಾಗಲಿ ಎಂದು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿ ಮಾಡಿತ್ತು. ಈ ಸರಕಾರ ಅದನ್ನು ರದ್ದು ಮಾಡಿ ಬಡವರ ಅನ್ನ ಕಿತ್ತುಕೊಂಡಿದೆಎಂದು ದೂರಿದರು. ಅಡಿಕೆ ಬೆಳೆಯನ್ನು ಬೆಳೆಯದಂತೆ ಗೃಹ ಸಚಿವರು ಸಲಹೆ ನೀಡುತ್ತಾರೆ ಎನ್ನುತ್ತಿದ್ದಂತೆ ಸದನದಲ್ಲಿ ಹಾಜರಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಿಸಿ ನಾನು ಆ ರೀತಿ ಹೇಳಿಕೆ ನೀಡಿಲ್ಲ. ಸದನಕ್ಕೆ ತಪ್ಪು ಹೇಳಿಕೆ ನೀಡಬೇಡಿ ಎಂದರು.
ಆಗ ಹರಿಪ್ರಸಾದ್, ನೀವು ಹೇಳಿದ್ದನ್ನೆ ನಾನು ಹೇಳಿದ್ದೇನೆ ಎಂದು ಸಚಿವರಿಗೆ ಉತ್ತರಿಸಿದರು. ಈ ಹಂತದಲ್ಲಿ ಎದ್ದು ನಿಂತ ಸಚಿವ ಸಿ.ಸಿ.ಪಾಟೀಲ್, ಹರಿಪ್ರಸಾದ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಎನ್‍ಆರ್‍ಇಜಿ ಪದ ಬಳಸಲಿಲ್ಲ ಎಂದರು. ಇದರಿಂದ ಕೋಪಗೊಂಡ ಹರಿಪ್ರಸಾದ್, ವಿಧಾನಸೌಧಕ್ಕೆ 10 ಲಕ್ಷ ತಂದಿದ್ದವರು ಯಾರಿಗೆ ತಂದಿದ್ದರು ಎನ್ನುವುದು ಗೊತ್ತಿದೆ ಎನ್ನುತ್ತಿದ್ದಂತೆ ಹರಿಪ್ರಸಾದ್ ಹಾಗೂ ಸಿಸಿ ಪಾಟೀಲ್ ನಡುವೆ ಏಕವಚನದಲ್ಲಿ ‘ನೀನು ಕೂತ್ಕೊ, ನನಗೆ ಹೇಳಲು ನೀನ್ಯಾರು’ ಎನ್ನುವ ಪದಗಳು ವಿನಿಮಯವಾದವು.
ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ವಿರೋಧ ಪಕ್ಷದ ನಾಯಕರ ಬಗ್ಗೆ ಗೌರವವಿದೆ ಎಂದು ಹೇಳಿದರು. ಆಗ ಹರಿಪ್ರಸಾದ್, ನನ್ನ ಬಗ್ಗೆ ನಿಮಗೆ ಗೌರವ ಬೇಡಾ ಸ್ವಾಮಿ, ರಾಜ್ಯದಲ್ಲಿ ಮಹಿಳೆಯರು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರವಾಗುತ್ತಿದೆ. ನನ್ನ ಮೇಲೆ ಗೌರವವಿದ್ದರೆ ಮೊದಲು ಇದನ್ನು ತಡೆಯಿರಿ ಎಂದು ಸಲಹೆ ನೀಡಿದರು.







