ಹೇರೂರು ಬಳಿ ಫೆ.23ರಿಂದ ರಾ. ಡ್ರ್ಯಾಗನ್ ಬೋಟ್ ಸ್ಪರ್ಧೆ

ಉಡುಪಿ, ಫೆ.22: ಇಲ್ಲಿಗೆ ಸಮೀಪದ ಹೇರೂರು ಗ್ರಾಮದಲ್ಲಿ ಹರಿಯುವ ಸುವರ್ಣ ನದಿಯ ಉಪನದಿಯಾದ ಮಡಿಸಾಲು ಹೊಳೆಯಲ್ಲಿ ಗುರುವಾರದಿಂದ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ ಷಿಪ್ ಪ್ರಾರಂಭಗೊಳ್ಳಲಿದ್ದು, ರಾ.ಹೆದ್ದಾರಿ 66ರಲ್ಲಿರುವ ಹೇರೂರು ಸೇತುವೆ ಬಳಿ ಸಂಜೆ 4 ಗಂಟೆಗೆ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ.
ಫೆ.23ರಿಂದ 26ರವರೆಗೆ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ 15 ರಾಜ್ಯಗಳ 635ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ 30ರಷ್ಟು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಹಾಗೂ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಇವುಗಳ ಸಹಯೋಗದೊಂದಿಗೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಈ ಆಕರ್ಷಕ ಸ್ಪರ್ಧೆಯನ್ನು ಆಯೋಜಿ ಸಲಾಗುತ್ತಿದೆ.
ಪುರುಷರು, ಮಹಿಳೆಯರು, ಮಿಶ್ರ, ಹಿರಿಯರು ಮತ್ತು ಕಿರಿಯರು ಸೇರಿದಂತೆ ಒಟ್ಟು 18 ವಿಭಾಗಗಳಲ್ಲಿ ಸ್ಪರ್ಧೆ ಗಳಿದ್ದು, 200ಮೀ., 500ಮೀ. ಹಾಗೂ 2000ಮೀ. ದೂರದ ಸ್ಪರ್ಧೆಗಳಿರುತ್ತವೆ. ಒಂದು ಬೋಟ್‌ನಲ್ಲಿ 12 (10ಸ್ಪರ್ಧಿಗಳು+2) ಹಾಗೂ 22 (20+2) ಮಂದಿಯ ಎರಡು ವಿಭಾಗದಲ್ಲಿ ಸ್ಪರ್ಧೆಗಳಿರುತ್ತವೆ. ಸ್ಪರ್ಧೆಗೆ 20 ಸೀಟ್‌ಗಳು 4 ಹಾಗೂ 12 ಸೀಟ್‌ಗಳ 7 ಬೋಟ್‌ಗಳನ್ನು ಬಳಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಯಾಕಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಕ್ಯಾಪ್ಟನ್ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಗಳು ತೋರುವ ಪ್ರದರ್ಶನದ ಆಧಾರದ ಮೇಲೆ ಮುಂದಿನ ಏಷ್ಯನ್ ಗೇಮ್ಸ್‌ಗೆ ಭಾರತೀಯ ತಂಡದ ಆಯ್ಕೆಯೂ ನಡೆಯಲಿರುವುದರಿಂದ ಇಲ್ಲಿ ನಡೆಯುವ ಸ್ಪರ್ಧೆಗೆ ವಿಶೇಷ ಮಹತ್ವ ಬಂದಿದೆ.
ಆತಿಥೇಯ ಕರ್ನಾಟಕ ಪುರುಷರ ತಂಡ ಕಳೆದ ನಾಲ್ಕು ಟೂರ್ನಿಗಳ ಚಾಂಪಿಯನ್ ಆಗಿದ್ದು, ಈ ಬಾರಿಯೂ ಮೇಲುಗೈ ಪಡೆಯುವ ನಿರೀಕ್ಷೆ ಇದೆ. ಈ ಬಾರಿ ಕರ್ನಾಟಕವಲ್ಲದೇ ಕೇರಳ, ತಮಿಳುನಾಡು ಪಾಂಡಿಚೇರಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ರಾಜಸ್ತಾನ್, ಮಣಿಪುರ ರಾಜ್ಯಗಳ ತಂಡಗಳು ಭಾಗವಹಿಸಲಿವೆ ಎಂದವರು ಹೇಳಿದ್ದಾರೆ.
ಸ್ಪರ್ಧೆ ನಡೆಯುವ ಮಡಿಸಾಲು ಹೊಳೆಯ ಒಂದು ಕಿ.ಮೀ. ಉದ್ದಕ್ಕೂ ನದಿಯ ಇಕ್ಕೆಲಗಳ ದಂಡೆಯಲ್ಲಿ 5000ಕ್ಕೂ ಅಧಿಕ ಮಂದಿ ಸ್ಪರ್ಧೆಯನ್ನು ವೀಕ್ಷಿಸಲು ಅವಕಾಶವಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.







