ತೆಲಂಗಾಣ: ತಪ್ಪಾಗಿ ಬಂದಿಸಲ್ಪಟ್ಟ ಖಾದಿರ್ ಖಾನ್ ಕಸ್ಟಡಿ ಸಾವಿಗೆ ಹೊಸ ತಿರುವು
ಸಿಸಿಟಿವಿಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ

ಹೊಸದಿಲ್ಲಿ, ಫೆ. 22: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿ ಚಿತ್ರಹಿಂಸೆಯಿಂದ 36 ವರ್ಷದ ದಿನಗೂಲಿ ಕಾರ್ಮಿಕ ಖಾದಿರ್ ಖಾನ್(kadir Khan) ಸಾವನ್ನಪ್ಪಿದ್ದು, ತೆಲಂಗಾಣ ಪೊಲೀಸರಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಿಸಿಟಿವಿ ಹಾಗೂ ಮುಖ ಗುರುತಿಸುವ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ಮೇದಕ್ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದ ಸರಗಳ್ಳ ಹಾಗೂ ಖಾದಿರ್ ನಡುವೆ ಸಾಮ್ಯತೆ ಇದ್ದುದರಿಂದ ಜನವರಿ 29ರಂದು ಹೈದರಾಬಾದ್ನಿಂದ ಖಾದಿರ್ನನ್ನು ತಪ್ಪಾಗಿ ಗುರುತಿಸಲಾಗಿದೆ ಹಾಗೂ ಬಂಧಿಸಲಾಗಿದೆ ಎಂದು ಈಗ ತಿಳಿದು ಬಂದಿದೆ. ಐದು ದಿನಗಳ ನಂತರ ಫೆಬ್ರವರಿ 3ರಂದು ಬಿಡುಡೆಯಾದ ಅವರು ಹೈದರಾಬಾದ್ನಲ್ಲಿರುವ ಸರಕಾರಿ ಸಾಮ್ಯದ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದರು.
ಸಾವನ್ನಪ್ಪುವ ಮುನ್ನ ದಾಖಲಿಸಲಾದ ವೀಡಿಯೊ ಹೇಳಿಕೆಯಲ್ಲಿ ಖಾದಿರ್ ಪೊಲೀಸರು ನೀಡಿದ ಚಿತ್ರ ಹಿಂಸೆಯನ್ನು ವಿವರವಾಗಿ ತಿಳಿಸಿದ್ದಾರೆ. ಸರಗಳ್ಳನೊಂದಿಗೆ ಸಾಮ್ಯತೆಯ ಕಾರಣಕ್ಕೆ ತಂತ್ರಜ್ಞಾನ ತಪ್ಪಾಗಿ ಗುರುತಿಸಿರುವುದು ಖಾದಿರ್ ಸಾವನ್ನಪ್ಪಲು ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಪ್ರತಿಪಾದಿಸಿದ್ದಾರೆ. ಖಾದಿರ್ ಪ್ರಕರಣದಲ್ಲಿ ಮುಖ ಗುರುತು ತಂತ್ರಜ್ಞಾನ (FRT)ವನ್ನು ಬಳಸಲಾಗಿದೆಯೇ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲದಿದ್ದರೂ ಸಿಸಿಟಿವಿ ದೃಶ್ಯಾವಳಿ ಬಳಿಸಿ ಅವರನ್ನು ಗುರುತಿಸಲಾಗಿದೆ ಎಂಬುದು ದೃಢಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇದಕ್ನ ಪೊಲೀಸ್ ಉಪ ಅಧೀಕ್ಷಕ ಕೆ. ಸೈದುಲು, ಸರಗಳ್ಳತನ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದ ವ್ಯಕ್ತಿ ಹಾಗೂ ಖಾದಿರ್ ನಡುವ ಸಾಮ್ಯತೆ ಇದ್ದುದರಿಂದ ಅವರನ್ನು ಬಂಧಿಸಲಾಯಿತು ಎಂದಿದ್ದಾರೆ. ‘‘ಖಾದಿರ್ ಅಪರಾಧಿ ಅಲ್ಲ ಎಂದು ತಿಳಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 3ರಂದು ಬಿಡುಗಡೆ ಮಾಡುವ ಮುನ್ನ ಅವರನ್ನು ಮಂಡಲ ಕಂದಾಯ ಅಧಿಕಾರಿ (MRO) ಮುಂದೆ ಹಾಜರುಪಡಿಸಲಾಗಿತ್ತು. ಎಲ್ಲವನ್ನೂ ಕಾನೂನು ಪ್ರಕಾರ ಮಾಡಲಾಗಿತ್ತು’’ ಎಂದು ಸೈದುಲು ತಿಳಿಸಿದ್ದಾರೆ.







