ಮೊರ್ಬಿ ತೂಗು ಸೇತುವೆ ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ಸೂಚನೆ

ಅಹ್ಮದಾಬಾದ್, ಫೆ. 22: ಮೊರ್ಬಿ ತೂಗು ಸೇತುವೆ(Morbi bridge) ದುರಂತದಲ್ಲಿ ಮೃತಪಟ್ಟ 135 ಮಂದಿಯ ಕುಟುಂಬಕ್ಕೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡ 56 ಮಂದಿಗೆ ತಲಾ 2 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ನಾಲ್ಕು ವಾರಗಳ ಒಳಗೆ ನೀಡುವಂತೆ ಮೊರ್ಬಿ ಸೇತುವೆಯನ್ನು ನಿರ್ವಹಿಸುತ್ತಿದ್ದ ಒರೆವಾ ಸಮೂಹಕ್ಕೆ ಗುಜರಾತ್ ಉಚ್ಚ ನ್ಯಾಯಾಲಯ(Gujarat High Court) ಬುಧವಾರ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೋನಿಯಾ ಗೋಖನಿ(Sonia Gokani) ಹಾಗೂ ನ್ಯಾಯಮೂರ್ತಿ ಸಂದೀಪ್ ಭಟ್(Sandeep Bhatt) ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಧ್ಯಂತರ ಪರಿಹಾರ ನೀಡಲು ನಿರ್ದೇಶಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಬ್ರಿಟಿಷ್ ಕಾಲದ ಸೇತುವೆ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ಹಾಗೂ ಗಾಯಗೊಂಡವರಿಗೆ ಒಟ್ಟು 5 ಕೋ.ರೂ. ಮಧ್ಯಂತರ ಪರಿಹಾರ ನೀಡಲು ಸಿದ್ದರಿದ್ದೇವೆ ಎಂದು ಒರೆವಾ ಸಮೂಹ ಮಂಗಳವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಕಂಪೆನಿ ನೀಡಲು ಬಯಸುತ್ತಿರುವ ಪರಿಹಾರ ನ್ಯಾಯಯುತವಾದುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.





