ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರಿಂದ ಪ್ರತಿಭಟನೆ

ಮಂಗಳೂರು, ಫೆ.22: ನಿವೃತ್ತ ಬಿಸಿಯೂಟ ನೌಕರರಿಗೆ ಇಡಿಗಂಟು 1 ಲಕ್ಷ ರೂ. ಮತ್ತು ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರಿಂದ ಬುಧವಾರ ದ.ಕ.ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ರಾಜ್ಯ ಸರಕಾರವು ಬಿಸಿಯೂಟ ಕಾರ್ಮಿಕರನ್ನು ಮೋಸ ಮಾಡುತ್ತಿದೆ. ವಯಸ್ಸಿನ ಆಧಾರದಲ್ಲಿ ನಿವೃತಿಗೊಳಿಸುವ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಹಲವಾರು ವರ್ಷಗಳಿಂದ ದುಡಿದಿರುವ ಕಾರ್ಮಿಕರಿಗೆ ಪರಿಹಾರ ಧನ ನೀಡದೆ ಕೆಲಸದಿಂದ ಬಿಡುಗಡೆಗೊಳಿಸುವುದು ಸಾಮಾಜಿಕ ನ್ಯಾಯವೆ? ಎಂದು ಪ್ರಶ್ನಿಸಿದರು.
ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭವ್ಯಾ ಮಾತನಾಡಿ ಸರಕಾರ ಬಡ ಕಾರ್ಮಿಕರ ಬದುಕು ಉತ್ತಮ ಗೊಳಿಸಲು ಕನಿಷ್ಟ ಕೂಲಿಯನ್ನು ಘೋಷಿಸಬೇಕು. ಬಜೆಟಲ್ಲಿ ಏರಿಸಲಾದ ಮಾಸಿಕ ವೇತನ 1000 ರೂ.ವನ್ನು 2023ರ ಜನವರಿಯಿಂದಲೇ ನೀಡಬೇಕೆಂದು ಒತ್ತಾಯಿಸಿದರು.
ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರಿಜಾ, ಸಿಐಟಿಯು ರಾಜ್ಯ ನಾಯಕ ವಸಂತ ಆಚಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ರತ್ನಮಾಲಾ, ರೇಖಲತಾ, ಉಮಾವತಿ, ಜಯಶ್ರೀ, ಅರುಣಾ, ಶೋಭಾ, ಅನಿತಾ ಮತ್ತಿತರರು ಪಾಲ್ಗೊಂಡಿದ್ದರು.