ಕೋವಿಡ್ ಭೀತಿ: ಅಪ್ರಾಪ್ತ ಮಗನೊಂದಿಗೆ ಮೂರು ವರ್ಷ ಸ್ವಯಂ ಗೃಹಬಂಧನದಲ್ಲಿ ಕಳೆದ ಮಹಿಳೆ!

ಗುರುಗ್ರಾಮ್: COVID-19 ಭಯಕ್ಕೆ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಸ್ವಯಂ ಗೃಹಬಂಧನದಲ್ಲಿದ್ದ ಘಟನೆ ಬೆಳಕಿಗೆ ಬಂದಿದೆ. ಗುರುಗ್ರಾಮ್‌ನ ಚಕ್ಕರ್‌ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳ ಕಾಲ ತನ್ನ ಅಪ್ರಾಪ್ತ ವಯಸ್ಸಿನ ಮಗನನ್ನು ತನ್ನೊಂದಿಗೆ ಕೂಡಿ ಹಾಕಿದ್ದ 33 ವರ್ಷದ ಮಹಿಳೆಯನ್ನು ಮಂಗಳವಾರ ಅಧಿಕಾರಿಗಳ ತಂಡವು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡವು ಮನೆಯ ಮುಖ್ಯ ಬಾಗಿಲನ್ನು ಒಡೆದು ಮುನ್ಮುನ್ ಮಾಝಿ ಎಂಬ ಮಹಿಳೆ ಹಾಗೂ ಆಕೆಯ 10 ವರ್ಷದ ಮಗನನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ಹೇಳಿದರು.
ತಾಯಿ-ಮಗ ಇಬ್ಬರನ್ನು ಗುರುಗ್ರಾಮದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
"ಮಹಿಳೆಗೆ ಕೆಲವು ಮಾನಸಿಕ ಸಮಸ್ಯೆಗಳಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಮನೋವೈದ್ಯಕೀಯ ವಾರ್ಡ್‌ಗೆ ದಾಖಲಿಸಲಾಗಿದೆ" ಎಂದು ಗುರುಗ್ರಾಮ್‌ನ ಸಿವಿಲ್ ಸರ್ಜನ್ ಡಾ ವೀರೇಂದ್ರ ಯಾದವ್ ಹೇಳಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಮುನ್ಮುನ್ ಅವರ ಪತಿ ಸುಜನ್ ಮಾಜ್ಹಿ ಅವರು ಚಕ್ಕರ್‌ಪುರದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್ ಅವರನ್ನು ಫೆಬ್ರವರಿ 17 ರಂದು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
2020 ರಲ್ಲಿ ಮೊದಲ ಲಾಕ್‌ಡೌನ್ ನಂತರ ನಿರ್ಬಂಧಗಳು ಸಡಿಲಗೊಂಡ ಬಳಿಕ ಮಹಿಳೆಯ ಪತಿ ಕೆಲಸಕ್ಕೆಂದು ಕಛೇರಿಗೆ ತೆರಳಲು ಆರಂಭಿಸಿದ್ದಾರೆ. ನಂತರ ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಅನುಮತಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಜನ್ ಮೊದಲ ಕೆಲವು ದಿನಗಳನ್ನು ಸ್ನೇಹಿತರು ಮತ್ತು ಸಂಬಂಧಿಕರ ಮನೆಯಲ್ಲಿ ಕಳೆದಿದ್ದು, ಅವರ ಹೆಂಡತಿಯ ಮನವೊಲಿಸಲು ವಿಫಲವಾಗಿದ್ದಾರೆ. ನಂತರ, ಅವರು ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ವಸತಿಗೃಹದಲ್ಲಿ ಉಳಿಯಲು ಪ್ರಾರಂಭಿಸಿದ್ದಾರೆ.
ಪತ್ನಿ ಮತ್ತು ಮಗನ ಜತೆ ಸಂಪರ್ಕದಲ್ಲಿರಲು ವಿಡಿಯೋ ಕಾಲ್‌ಗಳು ಮಾತ್ರ ದಾರಿಯಾಗಿತ್ತು ಎಂದು ಸುಜನ್ ಹೇಳಿದ್ದಾರೆ. ಮನೆಯ ಮಾಸಿಕ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ಮುಖ್ಯ ಬಾಗಿಲಿನ ಹೊರಗೆ ಇಟ್ಟು ಪತಿ ಹೋಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.