ಗೃಹ ಸಚಿವರ ಕ್ಷೇತ್ರದ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ತೀರ್ಥಹಳ್ಳಿ,ಫೆ. 22: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಸಾರ್ವಜನಿಕರ ಬೇಡಿಕೆಗೆ ಸರಕಾರ, ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರವಾದ ತೀರ್ಥಹಳ್ಳಿಯ ಕೆಲ ಗ್ರಾಮಗಳು ಚುನಾವಣೆಯಲ್ಲಿ ಮತ ಬಹಿಷ್ಕಾರ ನಿರ್ಧಾರ ಪ್ರಕಟಿಸಿವೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಪಂ ವ್ಯಾಪ್ತಿಯ ಉದ್ದಿನ ಹಕ್ಕಲು, ಕೆಳಗಿನ ಅಣ್ಣುವಳ್ಳಿ ಮಜರೆಹಳ್ಳಿ ಗ್ರಾಮಸ್ಥರು ಮತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಹಲವು ವರ್ಷದಿಂದ ಕಾಲು ಸೇತುವೆ, ರಸ್ತೆ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದರೂ ಈಡೇರಿಲ್ಲ. ಕೂಲಿ ಕೆಲಸದ ಬಡ ಕುಟುಂಬಗಳ ಬೇಡಿಕೆಗೆ ಸರಕಾರ, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಿಲ್ಲ. ಕೆಲಸ ಆಗದ ಮೇಲೆ ಮತ ಹಾಕಿ ಪ್ರಯೋಜನ ಏನು?. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತ ಬಹಿಷ್ಕಾರ ಅನಿವಾರ್ಯ ಎಂದಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲಿ ಗ್ರಾಮಸ್ಥರ ಮತ ಬಹಿಷ್ಕಾರ ತೀರ್ಮಾನ ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ. ಉದ್ದಿನಹಕ್ಕಲು, ಕೆಳಗಿನ ಅಣ್ಣುವಳ್ಳಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ಕಾಲು ಸೇತುವೆ ಸಂಪರ್ಕ ಕಡಿತವಾಗಿದೆ. 15 ವರ್ಷದ ಹಿಂದೆ ಕೊಚ್ಚಿ ಹೋದ ಕಾಲು ಸೇತುವೆಯನ್ನು ಈ ವರೆಗೂ ಮರು ನಿರ್ಮಾಣ ಮಾಡಿಲ್ಲ. ಕಾಲು ಸೇತುವೆ ಇಲ್ಲದೆ ಗ್ರಾಮಸ್ಥರು ಸುಮಾರು 5 ಕಿ.ಮೀ. ದೂರ ಸುತ್ತಿ ಮೇಗರವಳ್ಳಿ ಗ್ರಾಮ ಸಂಪರ್ಕಿಸಬೇಕಿದೆ.
ಗ್ರಾಮಸ್ಥರ ದಿಟ್ಟ ನಿರ್ಧಾರ: ಮತ ಬಹಿಷ್ಕಾರ ಕುರಿತಾಗಿ ಭಾವಚಿತ್ರ ಸಮೇತ ಪೋಸ್ಟರ್ ಪ್ರಕಟಿಸಿರುವ ಗ್ರಾಮಸ್ಥರು, ಉದ್ದಿನಹಕ್ಕಲು ಹಳ್ಳದ ಕಾಲು ಸೇತುವೆ, ರಸ್ತೆ ಅಭಿವೃದ್ಧಿ ಕೆಲಸ ಆಗದ ಹೊರತು ರಾಜೀ ಸಂಧಾನ ಇಲ್ಲವೆಂದು ಘೋಷಿಸಿದ್ದಾರೆ. ಉದ್ದಿನಹಕ್ಕಲು, ಕೆಳಗಿನ ಅಣ್ಣುವಳ್ಳಿ, ವಡೇಗದ್ದೆ ಸಂಪರ್ಕದ ಕಾಲು ಸೇತುವೆ, ರಸ್ತೆ ಅಭಿವೃದ್ಧಿಗೆ ಸುಮಾರು 20 ವರ್ಷದಿಂದ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಹಲವು ವರ್ಷದಿಂದ ಕಾಮಗಾರಿ ಹೆಸರಲ್ಲಿ ಭರವಸೆ ದೊರಕಿದ್ದರೂ ಪರಿಪೂರ್ಣ ಕಾಮಗಾರಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರಾದರೂ ಪ್ರಯೋಜನವಾಗಿಲ್ಲ: ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಗೃಹ ಸಚಿವರಾದರೂ ಕಾಲು ಸೇತುವೆ, ರಸ್ತೆ ಅಭಿವೃದ್ಧಿ ಆಗಿಲ್ಲ. ಜಿಲ್ಲಾ, ತಾಲೂಕು, ಗ್ರಾಪಂ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರ ಸಂಚಾರಕ್ಕೆ ಹಳ್ಳದ ರಸ್ತೆ ಮಾರ್ಗ ಅನಿವಾರ್ಯ. ಮತ ಕೊಟ್ಟರೂ ಕೆಲಸ ಆಗಲ್ಲ ಎಂದ ಮೇಲೆ ಮತ ಕೊಡದೆ ಸುಮ್ಮನಿರುವುದು ಲೇಸು ಎಂಬುದು ಗ್ರಾಮಸ್ಥರ ದಿಟ್ಟ ನಿರ್ಧಾರವಾಗಿದೆ.







