ದ. ಆಫ್ರಿಕಾ ಮಹಿಳಾ ಟಿ20 ವಿಶ್ವಕಪ್ ಸೆಮಿಫೆನಲ್‌ಗೆ
ಬಾಂಗ್ಲಾದೇಶಕ್ಕೆ 10 ವಿಕೆಟ್‌ಗಳ ಸೋಲು

ಕೇಪ್‌ಟೌನ್, ಫೆ. 22: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮಂಗಳವಾರ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿದೆ. ಲಾರಾ ವೊಲ್ವಾರ್ಟ್ ಮತ್ತು ಟಾಝ್ಮಿನ್ ಬ್ರಿಟ್ಸ್ ಅಜೇಯ ಅರ್ಧ ಶತಕಗಳನ್ನು ಬಾರಿಸಿ 117 ರನ್‌ಗಳ ಮುರಿಯದ ಆರಂಭಿಕ ಭಾಗೀದಾರಿಕೆಯನ್ನು ನಿಭಾಯಿಸಿದರು.
ಗುಂಪು ಒಂದರಲ್ಲಿ ದಕ್ಷಿಣ ಆಫ್ರಿಕಾವು ಎರಡನೇ ಸ್ಥಾನವನ್ನು ಪಡೆಯಿತು. ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮೊದಲ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ನಾಲ್ಕು ಅಂಕಗಳೊಂದಿಗೆ ತಮ್ಮ ಅಭಿಯಾನ ಮುಕ್ತಾಯಗೊಳಿಸಿವೆ. ಆದರೆ, ಉತ್ತಮ ರನ್ ಧಾರಣೆಯ ನೆರವಿನಿಂದ ಆತಿಥೇಯ ತಂಡವು ಸೆಮಿಫೈನಲ್ ತಲುಪಿದೆ.
ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವು ಎರಡನೇ ಗುಂಪಿನ ಅಗ್ರ ಸ್ಥಾನಿ ಇಂಗ್ಲೆಂಡನ್ನು ಎದುರಿಸಲಿದೆ.
ವೊಲ್ವಾರ್ಟ್ 66 ಮತ್ತು ಬ್ರಿಟ್ಸ್ 50 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಗೆಲುವಿಗೆ 114 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 13 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಾಖಲಿಸಿತು. ಅದು 17.5 ಓವರ್‌ಗಳಲ್ಲಿ 117 ರನ್‌ಗಳನ್ನು ಕಲೆಹಾಕಿತು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 113 ರನ್‌ಗಳನ್ನು ಗಳಿಸಿತು.
ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್‌ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.







