ವಿಶ್ವಕಪ್ ಶೂಟಿಂಗ್: ಭಾರತದ ಐಶ್ವರ್ಯ ಪ್ರತಾಪ್‌ಗೆ ಚಿನ್ನ

ಕೈರೋ: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಒಲಿಂಪಿಯನ್ ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್ ವೈಯಕ್ತಿಕ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಟೂರ್ನಿಯಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.
ಇದು ಭಾರತದ ಆರನೇ ಪದಕವಾಗಿದ್ದು, ನಾಲ್ಕು ಚಿನ್ನದ ಪದಕ ಇದರಲ್ಲಿ ಸೇರಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
22 ವರ್ಷ ವಯಸ್ಸಿನ ಥೋಮರ್, ಕಳೆದ ವರ್ಷದ ಚಂಗ್ವಾನ್ ವಿಶ್ವಕಪ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. ಚಿನ್ನದ ಪದಕ ಸ್ಪರ್ಧೆಯಲ್ಲಿ ಥೋಮರ್, ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಶ್ಚಿಮಿರ್ಲ್ ವಿರುದ್ಧ 16-6 ಅಂತರದ ಜಯ ಸಾಧಿಸಿದರು.
ರ್ಯಾಂಕಿಂಗ್ ಸುತ್ತಿನಲ್ಲಿ ಒಟ್ಟು 406.4 ಅಂಕಗಳೊಂದಿಗೆ ಥೋಮರ್ ಎರನೇ ಸ್ಥಾನಿಯಾಗಿದ್ದರು. ಅಲೆಗ್ಸಾಂಡರ್ 407.9 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು.
ಇದಕ್ಕೂ ಮುನ್ನ ಮೂರು ಸುತ್ತುಗಳಲ್ಲಿ 588 ಅಂಕ ಪಡೆದ ಭಾರತದ ಶೂಟರ್ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಮತ್ತೊಬ್ಬ ಭಾರತೀಯ ಪಟು ಅಖಿಲ್ ಶೆರಾನ್ 687 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದರು. ವಿಶ್ವಕಪ್‌ನಲ್ಲಿ ಥೋಮರ್‌ಗೆ ಇದು ಎರಡನೇ ಚಿನ್ನದ ಪದಕವಾಗಿದ್ದು, ಮೊದಲ ಪದಕವನ್ನು ದಕ್ಷಿಣ ಕೊರಿಯಾದಲ್ಲಿ ಜಯಿಸಿದ್ದರು.