ಉಳ್ಳಾಲ| ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್‌ಗಳ ಢಿಕ್ಕಿ: ಸವಾರ ಮೃತ್ಯು, ಸಹಸವಾರ ಗಂಭೀರ

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಎರಡು ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಇನ್ನೊಂದು ಸ್ಕೂಟರಿನಲ್ಲಿದ್ದ ಸವಾರ ಕೂಡಾ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾ.ಹೆ.66ರ ನೇತ್ರಾವತಿ ಸೇತುವೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಈ ಅಪಘಾತದಲ್ಲಿ ಅಂಗರಗುಂಡಿಯ ನಿವಾಸಿ ಮುಹಮ್ಮದ್ ನೌಫಾಲ್ (26) ಮೃತಪಟ್ಟಿದ್ದರೆ, ಸಹಸವಾರ ಉಮರ್ ಫಾರೂಕ್ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ನೌಫಾಲ್ ಬೈಕಂಪಾಡಿಯ ಎಪಿಎಂಸಿಯಲ್ಲಿ ತರಕಾರಿ ಅಂಗಡಿ ಹೊಂದಿದ್ದರು. ದಿನನಿತ್ಯ ಟೆಂಪೊದಲ್ಲಿ ಕಲ್ಲಾಪಿಗೆ ಬರುವ ನೌಫಾಲ್ ಇಂದು ಮುಂಜಾವ ಸ್ಕೂಟರಲ್ಲಿ ತರಕಾರಿ ಕೊಂಡೊಯ್ಯಲು ಬಂದಿದ್ದರು ಎನ್ನಲಾಗಿದೆ.
ಇನ್ನೊಂದು ಸ್ಕೂಟರಿನಲ್ಲಿದ್ದ ಗಾಯಾಳುವಿನ ವಿವರ ತಿಳಿದುಬಂದಿಲ್ಲ. ಇಬ್ಬರೂ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ವ್ಯಾಪಾರದ ಹಿನ್ನೆಲೆಯಲ್ಲಿ ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸಂದರ್ಭ ವೇಳೆ ಈ ಅಪಘಾತ ಸಂಭವಿಸಿದೆ. ಒಂದು ಸ್ಕೂಟರ್ ಢಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಸ್ಕೂಟರ್ ಕೂಡ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.