ಗೋರಖ್ಪುರ ಗಲಭೆ ಪ್ರಕರಣ: ಆದಿತ್ಯನಾಥ್ ವಿರುದ್ಧ ಪದೇ ಪದೇ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 1 ಲಕ್ಷ ರೂ.ದಂಡ

ಪ್ರಯಾಗ್‌ರಾಜ್ (ಉತ್ತರಪ್ರದೇಶ): 2007ರ ಗೋರಖ್‌ಪುರ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್(Adityanath) ವಿರುದ್ಧ ಪದೇ ಪದೇ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನಿಗೆ ಅಲಹಾಬಾದ್ ಹೈಕೋರ್ಟ್ ಬುಧವಾರ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಜನವರಿ 27, 2007 ರಂದು ಗೋರಖ್‌ಪುರದಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಒಬ್ಬ ಹಿಂದೂ ವ್ಯಕ್ತಿ ಕೊಲ್ಲಲ್ಪಟ್ಟಿದ್ದ.
ಅರ್ಜಿದಾರರಾದ ಪತ್ರಕರ್ತ ಪರ್ವೇಝ್ ಪರ್ವಾಝ್ ಅವರು ಸೆಪ್ಟೆಂಬರ್ 26, 2008 ರಂದು ದೂರು ಸಲ್ಲಿಸಿದ್ದು, ಬಿಜೆಪಿಯ ಆಗಿನ ಸ್ಥಳೀಯ ಸಂಸದ ಆದಿತ್ಯನಾಥ್ ಅವರು ಯುವಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಭಾಷಣಗಳನ್ನು ಮಾಡಿದ್ದಾರೆ ಹಾಗೂ ಅವರ ಬಳಿ ಅದರ ವೀಡಿಯೊಗಳಿವೆ ಎಂದು ಆರೋಪಿಸಿದರು.
ತರುವಾಯ ರಾಜ್ಯ ಸರ್ಕಾರವು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ನಿರಾಕರಿಸಿತು.
ಅರ್ಜಿದಾರರು ಸರಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು. ನಂತರ, ಅವರು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು, ಅದನ್ನು ಕೂಡ ವಜಾಗೊಳಿಸಲಾಗಿತ್ತು.
ಅರ್ಜಿದಾರರು ಅಕ್ಟೋಬರ್ 11, 2022 ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದರು. ಇದರಲ್ಲಿ ನ್ಯಾಯಾಲಯವು ಗಲಭೆ ಪ್ರಕರಣದಲ್ಲಿ ಪೊಲೀಸರ ಅಂತಿಮ ವರದಿಯ ವಿರುದ್ಧದ ಪ್ರತಿಭಟನಾ ಅರ್ಜಿಯನ್ನು ತಿರಸ್ಕರಿಸಿತ್ತು.







