ಧಾರ್ಮಿಕ ಮತಾಂತರಗಳ ಮೂಲಕ ಭಾರತದ ವಿರುದ್ಧ ಯುದ್ಧ ಸಾರಿದ ಆರೋಪ ಹೊತ್ತ ಸರ್ಕಾರಿ ಉದ್ಯೋಗಿಗೆ ಸುಪ್ರೀಂ ಕೋರ್ಟ್ ಜಾಮೀನು

ಹೊಸದಿಲ್ಲಿ: ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ಮೂಲಕ ಭಾರತದ ವಿರುದ್ಧ ಯುದ್ಧ ಸಾರಿದ್ದಾನೆಂಬ ಆರೋಪ ಎದುರಿಸುತ್ತಿದ್ದ ಸರ್ಕಾರಿ ಉದ್ಯೋಗಿಯೊಬ್ಬನಿಗೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ಜಾಮೀನು ಮಂಜೂರುಗೊಳಿಸಿದೆ.
ಆರೋಪಿ ಇರ್ಫಾನ್ ಶೇಖ್ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕಸ್ಟಡಿಯಲ್ಲಿರುವುದು ಹಾಗೂ ಪ್ರಕರಣದ ವಿಚಾರಣೆ ಇನ್ನೂ ಆರಂಭಗೊಳ್ಳದೇ ಇರುವುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರ ಪೀಠವು ಜಾಮೀನು ಮಂಜೂರುಗೊಳಿಸಿದೆ.
ಕೇಂದ್ರ ಸರ್ಕಾರದ ಉದ್ಯೋಗಿಯಾಗಿರುವ ಶೇಖ್‌ನನ್ನು ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆಯು ಜೂನ್ 28, 2021 ರಂದು ಬಂಧಿಸಿತ್ತು. ಪಾಕಿಸ್ತಾನದ ಐಎಸ್‌ಐ ಮತ್ತು ಇತರ ಧಾರ್ಮಿಕ ಸಂಘಟನೆಗಳ ನಿರ್ದೇಶಾನುಸಾರ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಕೆಲ ದೇಶ ವಿರೋಧಿ ಶಕ್ತಿಗಳು ಮತ್ತು ಧಾರ್ಮಿಕ ಸಂಘಟನೆಗಳ ಕುರಿತು ಮಾಹಿತಿ ದೊರಕಿದೆ ಎಂದು ಉಗ್ರ ನಿಗ್ರಹ ಪಡೆ ಹೇಳಿಕೊಂಡಿತ್ತು.
ಪ್ರಕರಣದಲ್ಲಿ ಬಂಧಿತರಾದ ಎಂಟು ಮಂದಿಯಲ್ಲಿ ಶೇಖ್ ಕೂಡ ಸೇರಿದ್ದ. ಐಪಿಸಿ ಯ ವಿವಿಧ ಸೆಕ್ಷನ್‌ಗಳು ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಗ್ರಹ ಕಾಯಿದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಹೈಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಶೇಖ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ವಿಚಾರಣಾ ನ್ಯಾಯಾಲಯ ಶೇಖ್‌ಗೆ ಷರತುಬದ್ಧ ಜಾಮೀನು ನೀಡಬಹುದು, ಆತನಿಗೆ ವಿಚಾರಣೆ ಸಂದರ್ಭ ಹೊರತುಪಡಿಸಿ ಇತರ ಸಮಯಗಳಲ್ಲಿ ಉತ್ತರ ಪ್ರದೇಶ ಪ್ರವೇಶಿಸದಂತೆ ನಿರ್ಬಂಧಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಉತ್ತರ ಪ್ರದೇಶದ ಹೊರಗಿನ ಇಬ್ಬರು ಶೂರಿಟಿಗಳನ್ನು ಪಡೆಯಲೂ ಸುಪ್ರೀಂ ಕೋರ್ಟ್ ಶೇಖ್‌ಗೆ ಅನುಮತಿಸಿದೆ.
ಕೇಂದ್ರ ಸರ್ಕಾರದ ತನ್ನ ಹುದ್ದೆಯನ್ನು ದುರ್ಬಳಕೆ ಮಾಡಿ ಧಾರ್ಮಿಕ ಮತಾಂತರ ನಡೆಸುತ್ತಿದ್ದ. ಇದು ದೇಶದ ಜಾತ್ಯತೀತತೆಯ ಮೇಲೆ ಪ್ರಭಾವ ಬೀರಬಹುದು ಎಂದು ಫೆಬ್ರವರಿ 15 ರಂದು ನಡೆದ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹೇಳಿದ್ದರು.
ಇದನ್ನೂ ಓದಿ: ಆದಿತ್ಯನಾಥ್ ವಿರುದ್ಧ ಪದೇ ಪದೇ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 1 ಲಕ್ಷ ರೂ.ದಂಡ







