ಪೌಷ್ಟಿಕತೆ, ಶಿಕ್ಷಣ, ಶುದ್ಧ ನೀರು, ನೈರ್ಮಲ್ಯ ಗುರಿ ತಲುಪದ ಕರ್ನಾಟಕ
ಆರ್ಥಿಕ ಸಮೀಕ್ಷೆಯಿಂದ ಬಹಿರಂಗ

ಬೆಂಗಳೂರು, ಫೆ.23: ಬಡತನ ಮುಕ್ತ, ಹಸಿವು ಮುಕ್ತ, ಗುಣಮಟ್ಟದ ಶಿಕ್ಷಣ, ಅಸಮಾನತೆಗಳ ಇಳಿಕೆ, ಶುದ್ಧ ನೀರು ಮತ್ತು ನೈರ್ಮಲ್ಯ ಸೇರಿದಂತೆ ಇನ್ನಿತರ ವಲಯಗಳಲ್ಲಿನ ಸುಸ್ಥಿರ ಅಭಿವೃದ್ಧಿ ಗುರಿಗಳು ಭಾರತ ಸೂಚ್ಯಂಕ ವರದಿ 2020-21ರ ಪ್ರಕಾರ ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಹಿಂದುಳಿದಿದೆ ಎಂಬ ಸಂಗತಿಯನ್ನು ಕರ್ನಾಟಕ ಆರ್ಥಿಕ ಸಮೀಕ್ಷೆ (2022-23)ಬಹಿರಂಗಪಡಿಸಿದೆ.
ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ರಾಜ್ಯ ಸರಕಾರವು ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಸರಕಾರವು ಭರ್ಜರಿ ಪ್ರಚಾರ ಪಡೆದುಕೊಂಡಿದ್ದರ ಬೆನ್ನಲ್ಲೇ ಕರ್ನಾಟಕ ಆರ್ಥಿಕ ಸಮೀಕ್ಷೆಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.
ವಾಜಪೇಯಿ ನಗರ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್, ಡಿ. ದೇವರಾಜ ಅರಸು ವಸತಿ, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್, ಪೂರಕ ಪೌಷ್ಟಿಕಾಂಶ, ಮಾತೃವಂದನ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಸಮಗ್ರ ಶಿಕ್ಷಣ, ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸೇಫ್ ಸಿಟಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ, ಮುಖ್ಯಮಂತ್ರಿ ನೈರ್ಮಲ್ಯ ಯೋಜನೆ, ವಾಯುಮಾಲಿನ್ಯ ಸೇರಿದಂತೆ ಇನ್ನಿತರ ವಲಯಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಗುರಿ ನಿಗದಿಪಡಿಸಿತ್ತು.
ಕೇಂದ್ರ ಪುರಸ್ಕೃತ ಮತ್ತು ರಾಜ್ಯ ವಲಯ ಯೋಜನೆಗಳ ವ್ಯಾಪ್ತಿಯಲ್ಲಿ ಕಚ್ಚಾ ಮನೆಗಳು, ಬೆಳವಣಿಗೆ ಕುಂಠಿತವಾಗಿರುವುದು ಮತ್ತು ತೂಕ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರಲ್ಲಿ ರಕ್ತಹೀನತೆ ಹೊಂದಿರುವುದು, ತಾಯಂದಿರ ಮರಣ ಪ್ರಮಾಣ, ಕನಿಷ್ಠ ಮಾಧ್ಯಮಿಕ ಶಿಕ್ಷಣ, ಪುರುಷ ಕಾರ್ಮಿಕರ ಭಾಗವಹಿಸುವಿಕೆಯ ದರಕ್ಕೆ ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆ ದರ, ಮಹಿಳಾ ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣ, ಕೊಳವೆ ನೀರು ಸರಬರಾಜಿನ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಪಡೆಯುವುದು, ನಿರುದ್ಯೋಗ ಪ್ರಮಾಣ, ಕಾರ್ಮಿಕ ಬಲದ ಭಾಗವಹಿಸುವಿಕೆ, ಪ್ರತೀ ಲಕ್ಷ ಜನಸಂಖ್ಯೆಗೆ ಪರಿಶಿಷ್ಟ ಪಂಗಡ ಮತ್ತು ಜಾತಿಗಳ ವಿರುದ್ಧದ ಅಪರಾಧಗಳು, ಒಳಚರಂಡಿ ಸೇರಿದಂತೆ 46 ವಲಯಗಳಲ್ಲಿ ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಸುಸ್ಥಿರ ಅಭಿವೃದ್ಧಿ ಗುರಿ ಮುಟ್ಟುವಲ್ಲಿ ಹಿಂದುಳಿದಿದೆ ಎಂಬ ಸಂಗತಿಯು ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಛತ್ತೀಸ್ಗಡ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು-ಕಾಶ್ಮೀರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳು ಈ ವಲಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ, ಕರ್ನಾಟಕವು ಹಿಂದುಳಿದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ವಾಜಪೇಯಿ ನಗರ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇನ್ನಿತರ ವಸತಿ ಯೋಜನೆಗಳಲ್ಲಿ ಕರ್ನಾಟಕವು 2.00 ಸೂಚ್ಯಂಕದಲ್ಲಿದೆ. ಪೂರಕ ಪೌಷ್ಟಿಕಾಂಶ (ಬೆಳವಣಿಗೆ ಕುಂಠಿತವಾಗಿರುವ ಶೇಕಡವಾರು ಮಕ್ಕಳು) ಕಾರ್ಯಕ್ರಮದಲ್ಲಿ 32.50, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಲ್ಲಿ (ತಾಯಂದಿರ ಮರಣ ಪ್ರಮಾಣ) 92.00, ಸಮಗ್ರ ಶಿಕ್ಷಣ ಅಭಿಯಾನ (ಕನಿಷ್ಠ ಮಾಧ್ಯಮಿಕ ಶಿಕ್ಷಣ)ದಲ್ಲಿ 1.07, ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯಲ್ಲಿ 10.80, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿಯಲ್ಲಿ 0.59,
ಪರಿಶಿಷ್ಟರ ಮೇಲಿನ ದೌರ್ಜನ್ಯದಲ್ಲಿ 7.70, ಸೇಫ್ ಸಿಟಿ ಯೋಜನೆಯಡಿಯಲ್ಲಿ 2.82, ಮಕ್ಕಳ ವಿರುದ್ಧ ಗುರುತಿಸಬಹುದಾದ ಅಪರಾಧಗಳಲ್ಲಿ 32.20ರಷ್ಟು ಸೂಚ್ಯಂಕ ಹೊಂದಿದೆ. ಇದೇ ವಿಭಾಗದಲ್ಲಿ ಅನ್ಯ ರಾಜ್ಯಗಳು ಉತ್ತಮ ಮತ್ತು ಅತ್ಯುತ್ತಮ ಪ್ರದರ್ಶನ ತೋರಿರುವುದು ಸಮೀಕ್ಷೆ ವರದಿಯಿಂದ ಗೊತ್ತಾಗಿದೆ.
ಅಲ್ಲದೆ, ಇದೇ ವಿಭಾಗದ ಒಟ್ಟು 16 ವಲಯಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು 2023-24ನೇ ಸಾಲಿಗೆ 13,180.53 ಕೋಟಿ ರೂ.ಗಳನ್ನು ಪ್ರಸ್ತಾವಿಸಿದೆ. ಕಳೆದ ಆರ್ಥಿಕ ವರ್ಷ (2022-23)ದಲ್ಲಿ ಇದೇ ಉದ್ದೇಶಕ್ಕೆ ಆಯವ್ಯಯದಲ್ಲಿ 23,586.21 ಕೋಟಿ ರೂ. ಗಳನ್ನು ಹಂಚಿಕೆ ಮಾಡಲಾಗಿತ್ತು.
ಕಳೆದ ವರ್ಷದ ಹಂಚಿಕೆಯೂ ಸೇರಿದಂತೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಒಟ್ಟಾರೆ 36,766.74 ಕೋಟಿ ರೂ. ಪ್ರಸ್ತಾವಿಸಿದಂತಾಗಿದೆ. ಈ ಸಂಬಂಧ ಯೋಜನಾ ಇಲಾಖೆಯು ಮಂಡಿಸಿರುವ ಪ್ರಸ್ತಾವನೆ ಮತ್ತು ಅಂಕಿ ಅಂಶಗಳು 'the-file.in' ಗೆ ಲಭ್ಯವಾಗಿವೆ.







