ಮಾದಕ ವಸ್ತು ಸೇವನೆ: 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಮಾಹೆ ವಿಶ್ವವಿದ್ಯಾನಿಲಯ

ಉಡುಪಿ, ಫೆ.23: ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಆರೋಪವನ್ನು ಎದುರಿಸುತ್ತಿರುವ ಮಣಿಪಾಲ ಮಾಹೆ ವಿವಿಯ 42 ಮಂದಿ ವಿದ್ಯಾರ್ಥಿ ಗಳನ್ನು ವಿವಿ ಆಡಳಿತ ಮಂಡಲಿ ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ
ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಮಾಹೆಯ ಒಟ್ಟು 42 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಾದಕ ದ್ರವ್ಯ ಸೇವನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿರುವ ಮಾಹೆ ವಿವಿ ಈ ಬಗ್ಗೆ ಆಂತರಿಕ ತನಿಖೆ ಕೈಗೊಂಡಿದ್ದು,ತನಿಖೆ ಪೂರ್ಣಗೊಳ್ಳುವವರೆಗೆ ಈ ಎಲ್ಲಾ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹೆ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಮಾದಕ ದ್ರವ್ಯ ಸೇವನಾ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಕಾರ್ಯಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಪೆಡ್ಲರ್‌ಗಳ ಮೂಲಕ ಗ್ರಾಹಕರು ಯಾರು ಅನ್ನೋದು ಪತ್ತೆಯಾಗಿದ್ದು, ಕೆಲ ಗ್ರಾಹಕರಿಂದ ಪೆಡ್ಲರ್‌ಗಳು ಯಾರು ಎಂಬುದು ಸಹ ಪತ್ತೆಯಾಗಿದೆ. ಮಾಹೆಯ ಕೆಲ ವಿದ್ಯಾರ್ಥಿಗಳು ಕೂಡ ಪೆಡ್ಲರ್‌ಗಳಾಗಿರುವ ಮಾಹಿತಿ ಸಿಕ್ಕಿದ್ದು, ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಈ ಪ್ರಕರಣ ಬಗ್ಗೆ ನಾವು ವಿವಿಗೆ ವಿವರವಾದ ಮಾಹಿತಿ ನೀಡಿದ್ದೆವು ಎಂದರು.
ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಟೆಸ್ಟಿಂಗ್ ಮೂಲಕ ಸಾಬೀತಾಗಿರುವ ಪ್ರಕರಣಗಳ ವಿವರ ಕೂಡ ವಿವಿಗೆ ನೀಡಿದ್ದೇವೆ. ಮಣಿಪಾಲ ವಿವಿ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಮಣಿಪಾಲ ವಿವಿ 42 ಮಂದಿಯನ್ನು ಅಮಾನತು ಮಾಡಿದೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ ವಿವಿಯಾಗಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅನ್ನೋ ಸಂದೇಶ ಎಲ್ಲರಿಗೂ ರವಾನೆಯಾಗಿದೆ ಎಂದರು.
ಮಾದಕ ದ್ರವ್ಯ ಸೇವನೆ ಮಾಡಿದವರನ್ನು ಮಾಹೆ ವಿವಿ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಅಮಾನತು ಮಾಡಲಾದ ವಿದ್ಯಾರ್ಥೀಗಳಿಗೆ ಒಂದು ತಿಂಗಳ ಕಾಲ ತರಗತಿ ಹಾಜರಾಗಲು ಅವಕಾಶವಿಲ್ಲ. ವಿಶ್ವವಿದ್ಯಾನಿಲಯದ ಯಾವುದೇ ಸೌಲಭ್ಯಗಳನ್ನು ಅವರು ಬಳಸುವಂತಿಲ್ಲ. ಪೆಡ್ಲರ್‌ಗಳ ಮೇಲೆ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲದೆ ಅವರ ವಿರುದ್ಧ ಪೋಲಿಸ್ ಇಲಾಖೆ ಕ್ರಿಮಿನಲ್ ಕೇಸ್ ಸಹ ಹಾಕಲಿದೆ ಎಂದರು.
ಮಾದಕ ವಸ್ತುಗಳ ಸೇವನೆಯ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಮಾನಸಿಕವಾಗಿ ಧೈರ್ಯವನ್ನು ತುಂಬಲಾಗುತ್ತದೆ. ಮಾದಕ ಸೇವನೆ ಮಾಡಿದವರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ಪೆಡ್ಲರ್‌ಗಳನ್ನು ಕ್ರಿಮಿನಲ್‌ಗಳೆಂದೇ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಾಕೆ ತಿಳಿಸಿದರು.







