ದಿಲ್ಲಿಯಲ್ಲಿ ನಡೆಯಲಿರುವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಬಹಿಷ್ಕರಿಸಿದ ದೇಶಗಳ ಪಟ್ಟಿಗೆ ಸೇರ್ಪಡೆಯಾದ ಉಕ್ರೇನ್

ಹೊಸದಿಲ್ಲಿ: ಮುಂದಿನ ತಿಂಗಳು ದಿಲ್ಲಿಯಲ್ಲಿ ಆಯೋಜನೆಗೊಂಡಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಬಹಿಷ್ಕರಿಸಿದ ದೇಶಗಳ ಪಟ್ಟಿ ಬೆಳೆಯುತ್ತಲೇ ಸಾಗಿದ್ದು, ಈ ಪಟ್ಟಿಗೆ ಇದೀಗ ಯುದ್ಧಪೀಡಿತ ಉಕ್ರೇನ್ ಕೂಡಾ ಸೇರ್ಪಡೆಯಾಗಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ರಷ್ಯಾ ಹಾಗೂ ಬೆಲಾರಸ್ ದೇಶದ ಬಾಕ್ಸರ್‌ಗಳು ಭಾಗವಹಿಸುತ್ತಿರುವುದರಿಂದ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲು ಉಕ್ರೇನ್ ನಿರ್ಧರಿಸಿದೆ. ಇದಲ್ಲದೆ, ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಸ್ಪರ್ಧಿಸದಿರಲು ಉಕ್ರೇನ್ ನಿರ್ಧರಿಸಿದೆ ಎಂದು indianexpress.com ವರದಿ ಮಾಡಿದೆ.
"ದಾಳಿಕೋರ ದೇಶಗಳ ಬಾಕ್ಸರ್‌ಗಳು ಭಾಗವಹಿಸುತ್ತಿರುವ ಸ್ಪರ್ಧಾಕೂಟದಲ್ಲಿ ನಮ್ಮ ದೇಶದ ಬಾಕ್ಸರ್‌ಗಳು ಸ್ಪರ್ಧಿಸುವುದಿಲ್ಲ" ಎಂದು ಉಕ್ರೇನ್ ಬಾಕ್ಸಿಂಗ್ ಫೆಡರೇಷನ್‌ನ ಉಪಾಧ್ಯಕ್ಷ ಒಲೆಗ್ ಇಲ್ಚೆಂಕೊ ಹೇಳಿದ್ದಾರೆ ಎಂದು ಉಕ್ರೇನ್‌ನ Suspilne Sport ವರದಿ ಮಾಡಿದೆ.
ಇದೇ ಶುಕ್ರವಾರಕ್ಕೆ ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿ, ಒಂದು ವರ್ಷ ಪೂರೈಸುತ್ತಿದೆ. ಅದಾಗಲೇ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್, ರಷ್ಯಾ ಆಕ್ರಮಣದ ನಂತರ ಮತ್ತಷ್ಟು ಸಮಸ್ಯೆಗೀಡಾಗಿದೆ. ಯಾಕೆಂದರೆ, ಅದರ ಮುಖ್ಯಸ್ಥ ರಷ್ಯಾದ ಅಧಿಕಾರಿ ಉಮರ್ ಕ್ರೆಮ್ಲೆವ್ ಆಗಿದ್ದು, ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ರಷ್ಯಾ ಹಾಗೂ ಬೆಲಾರಸ್ ಬಾಕ್ಸರ್‌ಗಳನ್ನು ಸೇರ್ಪಡೆ ಮಾಡಿಕೊಂಡಿರುವುದರಿಂದ, ಹಲವಾರು ದೇಶಗಳು ತಮ್ಮ ಬಾಕ್ಸರ್‌ಗಳನ್ನು ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿವೆ. ಉಕ್ರೇನ್ ಅಲ್ಲದೆ, ಅಮೆರಿಕಾ, ಬ್ರಿಟನ್, ಸ್ವಿಝರ್ ಲ್ಯಾಂಡ್, ಪೋಲ್ಯಾಂಡ್, ದ ನೆದರ್ಲೆಂಡ್ಸ್, ಐರ್ಲೆಂಡ್, ಝೆಕ್ ರಿಪಬ್ಲಿಕ್, ಸ್ವೀಡನ್ ಮತ್ತು ಕೆನಡಾ ದೇಶಗಳೂ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದವು.
ಚಾಂಪಿಯನ್‌ಶಿಪ್‌ನಲ್ಲಿ 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್‌ಗಳು ಭಾಗವಹಿಸಲಿದ್ಧಾರೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಬುಧವಾರ ಹೇಳಿತ್ತು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಈ ಚಾಂಪಿಯನ್‌ಶಿಪ್ ಅರ್ಹತಾ ಸುತ್ತಾಗಿರುವುದರಿಂದ ಸ್ಪರ್ಧಾಳುಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್ ಪ್ರತಿಪಾದಿಸಿತ್ತು.
ಇದನ್ನೂ ಓದಿ: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವರ್ಗಾವಣೆ







