ಹೊಸಬೆಟ್ಟುನಲ್ಲಿರುವ ಕಟ್ಟಡವು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶೌಚಾಲಯದ ನೀರು ತುಂಬಿದೆ: ಸ್ಥಳೀಯರ ಆರೋಪ

ಸುರತ್ಕಲ್ : ಸರಕಾರವು ವಿಶ್ವಬ್ಯಾಂಕ್ ನೆರವಿನಿಂದ ತುರ್ತು ಸಂದರ್ಭಕ್ಕಾಗಿ ನಿರ್ಮಿಸಿದ್ದ ಹೊಸಬೆಟ್ಟುನಲ್ಲಿರುವ ಕಟ್ಟಡವು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶೌಚಾಲಯದ ನೀರು ತುಂಬಿ ತುಳುಕುತ್ತಿದ್ದು, ಸುತ್ತಲಿನ ಮನೆಗೆಳ ಬಾವಿಗಳ ನೀರು ಹಾಳಾಗುವ ಜೊತೆಗೆ ಚರಂಡಿ ಸಮಸ್ಯೆ ಉದ್ಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 70 ಮಂದಿ ಕೆಎಸ್‌ಆರ್‌ಪಿ ಜವಾನರನ್ನು ಹೊಸಬೆಟ್ಟುವಿನಲ್ಲಿ ಸರಕಾರ ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಿದ್ದ ಚಂಡಮಾರುತ ವಿಕೋಪ ರಕ್ಷಣಾ ಕಟ್ಟಡದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಕಟ್ಟಡ ಶೌಚಗುಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣಕ್ಕಾಗಿ ಶೌಚಗುಂಡಿ ತುಂಬಿ ತುಳುಕುತ್ತಿದೆ. ಕಟ್ಟಡದ ಬದಿಯಲ್ಲೇ ಶೌಚದ ನೀರು ನಿಂತು ದುರ್ವಾಸನೆಯ ಜೊತೆಗೆ ಸೊಳ್ಳೆ ಉತ್ಪತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತುಂಬಾ ವಾಸನೆ ಬರುತ್ತೆ. ಶೌಚಾಲಯದ ನೀರು ಸೋರಿಕೆಯಾಗುತ್ತಿದೆ. ಶೌಚಾಲಯದ ನೀರು ಹೋಗುವ ಹೊಂಡದ ತಲಭಾಗಕ್ಕೆ ಕಾಂಕ್ರೆಟ್ ಹಾಕಿರುವ ಸಾಧ್ಯತೆ ಇದೆ. ಹಾಗಾಗಿ ನೀರು ಭೂಮಿಯಲ್ಲಿ ಇಂಗದೇ ಹೊರಗೆ ಬರುತ್ತಿದೆ. ಹತ್ತಿರದಲ್ಲಿ ಮಂದಿರ ಇದೆ. ಮಂದಿತರಕ್ಕೆ ಬರುವ ಭಕ್ತರು ಮತ್ತು ಅಕ್ಕಪಕ್ಕದ ಮನೆಗಳಿಗೆ ಇದರಿಂದಾಗಿ ಸಮಸ್ಯೆಯಾಗುತ್ತಿದೆ. ಇಲ್ಲಿ ವಾಸ್ತವ್ಯವಿರುವ ಪೊಲೀಸರಿಂದ ಯಾವುದೇ ರೀತಿಯ ಸಮಸ್ಯೆಗಳು ಆಗುತ್ತಿಲ್ಲ. ಶೌಚ ಗುಂಡಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಮಸ್ಯೆಗಳು ಉದ್ಭವವಾಗಿದೆ ಎಂದು ಚಂಡ ಮಾರುತ ವಿಕೋಪ ರಕ್ಷಣಾ ಕಟ್ಟಡದ ಸಮೀಪದ ಮನೆಯ ನಿವಾಸಿಯೊಬ್ಬರು ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ನಮ್ಮ ಮನೆಗಳಲ್ಲೇ ನಿಲ್ಲಲಾಗುತ್ತಿಲ್ಲ. ದುರ್ವಾಸನೆ ಬೀರುತ್ತಿರುತ್ತದೆ. ಇದು 500 ರಿಂದ 700 ಮಂದಿಯ ವಾಸ್ತವ್ಯ ಮಾಡಬಹುದಾದ ಕಟ್ಟಡ. ಆದರೆ, ಈಗ ಕೇವಲ 60-70 ಮಂದಿ ಪೊಲೀಸರಷ್ಟೇ ಇದ್ದಾರೆ. ಒಂದು ವೇಳೆ ಪ್ರಕೃತಿ ವಿಕೋಪ ಸಂಭವಿಸಿ 500-700 ಜನ ನಿರ್ವಸಿತರು ಬಂದು ಇಲ್ಲಿ ನೆಲೆಸಿದರೆ ಪರಿಸ್ಥಿತಿ ಹೇಗಿರ ಬಹುದು? ಇದು ಪೊಲೀಸರು ಉಳಿದು ಕೊಂಡಿರುವುದರಿಂದ ಆಗಿರುವ ಸಮಸ್ಯೆಯಲ್ಲ. ಇಲ್ಲಿನ ಶೌಚಾಲಯದ ನೀರು ಹರಿದು ಹೋಗಲು ಮತ್ತು ಇಂಗಿಹೋಗಲು ಸರಿಯಾದ ಕ್ರಮವಹಿಸದೇ ಮಾಡಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಚಂಡ ಮಾರುತ ವಿಕೋಪ ರಕ್ಷಣಾ ಕಟ್ಟಡದ ಪಕ್ಕದ ಮನೆಯ ಹರಿಕೃಷ್ಣ ಸಾಲ್ಯಾನ್ ಹೇಳುತ್ತಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿಯ ಮೂರು ತುಕಡಿಗಳ ಸುಮಾರು 70 ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಶಾಲಾ ಕಾಲೇಜುಗಳ ಸಭಾಭವನಗಳು ಉಪಯೋಗಿಸಿಕೊಳ್ಳಲು ಶಾಲೆ ಕಾಲೇಜುಗಳು ನಡೆಯುತ್ತಿರುತ್ತವೆ. ಮದುವೆಯ ಛತ್ರಗಳನ್ನು ಇವರಿಗಾಗಿ ವಹಿಸಿಕೊಳ್ಳಲು ಎಲ್ಲಾ ಛತ್ರಗಳು ಕಾರ್ಯಕ್ರಮಗಳ ನಿಮಿತ್ತ ನೀಡಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಹೊಸಬೆಟ್ಟುವಿನಲ್ಲಿ ಸರಕಾರದ್ದೇ ಆಗಿರುವ ಮತ್ತು ತುರ್ತು ಸಂದರ್ಭಗಳಿಗಾಗಿ ಬಳಸಬಹುದಾದ ಚಂಡ ಮಾರುತ ವಿಕೋಪ ರಕ್ಷಣಾ ಕಟ್ಟಡ ಇದ್ದುದರಿಂದ ಜವಾನರನ್ನು ಅದರಲ್ಲೇ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಸುಮಾರು 500 ಮಂದಿ ಏಕಕಾಲದಲ್ಲಿ ಉಳಿದು ಕೊಳ್ಳಬದಾದ ವ್ಯವಸ್ಥೆ ಇದೆ. ಆದರೆ, ಇಲ್ಲಿ 70 ಪೊಲೀಸರಷ್ಟೇ ಕಳೆದ ಮೂರು ತಿಂಗಳುಗಳಿಂದ ವಾಸ್ತವ್ಯಹೂಡಿದ್ದಾರೆ. ಪೊಲೀಸರು ಸರಕಾರಿ ಉದ್ಯೋಗಿಗಳೇ ಆಗಿರುವುದರಿಂದ ಅವರು ಉಳಿದು ಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಇಲ್ಲಿ ಮಾಡಲಾಗಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಗಳು ಆರಂಬಗೊಂಡಿವೆ ಎಂದು ಕಟ್ಟಡದ ಸಮೀಪದ ನಿವಾಸಿಗಳೇ ಹೇಳುತ್ತಿದಾರೆ.
ʼಪೊಲೀಸರು ಇಲ್ಲಿ ವಾಸ್ತವ್ಯ ಹೂಡಿರುವುದರಿಂದ ಈ ಸಮಸ್ಯೆ ಉದ್ಭವಾಗಿದೆ ಎಂಬುವುದು ಅವೈಜ್ಞಾನಿಕ. ಅವರು 70 ಮಂದಿಯಷ್ಟೇ ಇದ್ದಾರೆ. ಅವರನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಜನರು ಇಲ್ಲಿ ವಾಸ್ತವ್ಯ ಹೂಡಿದರೆ ಆಗಲೂ ಈ ಪರಿಸ್ಥಿತಿ ಉದ್ಭವಿಸುತ್ತದೆ. ಹಾಗಾಗಿ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಕಾಮಗಾರಿ ಮಾಡಿರುವ ಇಂಜಿನಿಯರ್ ಸಹಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ ಶೀಘ್ರ ಶೌಚಾಲಯದ ನೀರಿನಿಂದಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಅದು ಬಿಟ್ಟು ಪೊಲೀಸರನ್ನು ಗುರಿಯಾಗಿಸಿ ಅವರನ್ನು ತೆರವು ಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲʼ.
-ಪ್ರವೀನ್ ಸಾಲ್ಯಾನ್
ಚಂಡ ಮಾರುತ ವಿಕೋಪ ರಕ್ಷಣಾ ಕಟ್ಟಡದ ಪಕ್ಕದ ಮನೆಯ ನಿವಾಸಿ
ʼಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದ ಕಾರಣಕ್ಕಾಗಿ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಮೂರು ತುಕಡಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಅವರಿಗೆ ಹೊಸಬೆಟ್ಟುವಿನಲ್ಲಿರುವ ಚಂಡ ಮಾರುತ ವಿಕೋಪ ರಕ್ಷಣಾ ಕಟ್ಟಡದಲ್ಲಿ ವ್ಯವಸ್ಥೆ ಮಾಡಕಲಾಗಿತ್ತು. ಅಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಂದಾಗಿ ನಮ್ಮ ಜವಾನರನ್ನು ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆʼ.
-ಮಹೇಶ್ ಪ್ರಸಾದ್
ಪೊಲೀಸ್ ವೃತ್ತ ನಿರೀಕ್ಷಕರು, ಸುರತ್ಕಲ್ ಪೊಲೀಸ್ ಠಾಣೆ









