ವಿಟ್ಲ: ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆ ಬಂದ್ ಮಾಡಿದ ವ್ಯಕ್ತಿ; ಅಧಿಕಾರಿಗಳಿಂದ ತೆರವು

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುರಭವನ ಬಳಿ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿ ಮಣ್ಣು ಹಾಕಿ ಬಂದ್ ಮಾಡಿದ್ದರ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಪುರಭವನ ಬಳಿ ಇರುವ ರಸ್ತೆಯನ್ನು ಇತ್ತೀಚೆಗೆ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೊಳಿಸಿತ್ತು. ಈ ಭಾಗದಲ್ಲಿ ನೂರಕ್ಕಿಂತಲೂ ಅಧಿಕ ಮನೆಗಳಿವೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನಕ್ಕೂ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಕೆಲ ದಿನಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಈ ರಸ್ತೆ ನನ್ನ ವರ್ಗ ಜಾಗದಲ್ಲಿದೆ ಎಂದು ಆರೋಪಿ ರಸ್ತೆಯನ್ನು ಬಂದ್ ಮಾಡಿದ್ದರು. ಇದರಿಂದ ಈ ಭಾಗದ ಜನರು ಭಾರೀ ತೊಂದರೆ ಅನುಭವಿಸಿದ್ದರು.
ಈ ಬಗ್ಗೆ ಈ ಭಾಗ ಪಟ್ಟಣ ಪಂಚಾಯಿತಿ ಸದಸ್ಯೆ ಸಂಗೀತ ಜಗದೀಶ ಪಾಣೆಮಜಲು ಅವರ ನೇತೃತ್ವದಲ್ಲಿ ವಿಟ್ಲ ಬಿಲ್ಲವ ಸಂಘ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ನಾಗರೀಕರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತೆರವುಗೊಳಿಸುವಂತೆ ಆದೇಶ ನೀಡಿದ್ದರು.
ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಪುರಂದರ, ಸಹಾಯಕ ಎಂಜಿನಿಯರ್ ಅರುಣ್
ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಎಂಜಿನಿಯರ್ ದಿನೇಶ್, ಸದಸ್ಯರಾದ ಸಂಗೀತ ಜಗದೀಶ ಪಾಣೆಮಜಲು, ಅರುಣ ಎಂ ವಿಟ್ಲ, ಹರೀಶ್ ಸಿ.ಎಚ್,ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.