ಲೇಡಿಹಿಲ್ : ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ಮನಪಾ ಉಪಾಯುಕ್ತರ ಕಚೇರಿಗೆ ಮುತ್ತಿಗೆ

ಮಂಗಳೂರು: ನಗರದ ಲೇಡಿಹಿಲ್-ಮಂಗಳ ಕ್ರೀಡಾಂಗಣದ ಸುತ್ತಮುತ್ತಲಿನ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದ್ದನ್ನು ಖಂಡಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಮನಪಾ ಉಪಾಯುಕ್ತರ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಪರಿಸರದಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳನ್ನು ಮನಪಾವು ದಿಢೀರ್ ಆಗಿ ದಾಳಿ ನಡೆಸಿ ಎತ್ತಂಗಡಿ ಮಾಡಿತು. ವ್ಯಾಪಾರಿಗಳ ಆಹಾರದ ಸಾಮಗ್ರಿಗಳನ್ನು ವಶಪಡಿಸಿಕೊಂಡ ನಗರಪಾಲಿಕೆಯ ಆರೋಗ್ಯ ಇಲಾಖೆಯ ನೀತಿಯನ್ನು ಖಂಡಿಸಿದ ಪಟ್ಟಣ ವ್ಯಾಪಾರ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಪಾಲಿಕೆಯ ಉಪ ಆಯುಕ್ತರ ಕಚೇರಿಗೆ ಮತ್ತು ಆರೋಗ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ವಶಪಡಿಸಲಾದ ಸೊತ್ತುಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಲಾಯಿತು. ಇದಕ್ಕೆ ಅಧಿಕಾರಿಗಳು ಸ್ಪಂದಿಸದಿದ್ದಾಗ ವಶಪಡಿಸಿದ ಸೊತ್ತು ವಾಪಸ್ ನೀಡುವ ತನಕ ಪಾಲಿಕೆ ಕಚೇರಿಯಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೂ ಒತ್ತಡಕ್ಕೆ ಮಣಿದ ಅಧಿಕಾರಿಗಳು ವಶಪಡಿಸಿದ ಸೊತ್ತು ವಾಪಸ್ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಖಜಾಂಚಿ ಆಸೀಫ್ ಬಾವ ಉರುಮನೆ, ಮುಖಂಡರಾದ ಆನಂದ ಲೇಡಿಹಿಲ್, ಖಾಜಾ ಮೊಹಿಯುದ್ದೀನ್, ಗಜಾನನ ಕಂಕನಾಡಿ, ಗೋಪಾಲ್ ವೆಲೆನ್ಸಿಯ, ಆಸೀಫ್ ಇಕ್ಬಾಲ್ ಲೇಡಿಹಿಲ್ ಪಾಲ್ಗೊಂಡಿದ್ದರು.