ಮಂಡ್ಯ | ಮದುವೆಯಾಗಲು ಹೆಣ್ಣು ಕೊಡುವಂತೆ ಪ್ರಾರ್ಥಿಸಿ ಮಲೆಮಹದೇಶ್ವರ ಬೆಟ್ಟಕ್ಕೆ ‘ಬ್ರಹ್ಮಚಾರಿಗಳ’ ಪಾದಯಾತ್ರೆ
ಪಾದಯಾತ್ರೆಗೆ ಚಾಲನೆ ನೀಡಿದ ನಟ ಡಾಲಿ ಧನಂಜಯ

ಮಂಡ್ಯ, ಫೆ.23: ಮದುವೆಯಾಗಲು ಹೆಣ್ಣು ಸಿಗದಿರುವ ಬ್ರಹ್ಮಚಾರಿಗಳು ಗುರುವಾರ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಿಂದ ಹೆಣ್ಣುಕೊಡುವಂತೆ ಪ್ರಾರ್ಥಿಸಿ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.
ಈ ಸಂಬಂಧ ಪ್ರಕಟಣೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಮದುವೆಯಾಗದ ಸುಮಾರು 150 ಮಂದಿ ಬೆಳಗ್ಗೆ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು. ಚಿತ್ರನಟ ಡಾಲಿ ಧನಂಜಯ ಯಾತ್ರೆಗೆ ಚಾಲನೆ ನೀಡಿ ಶುಭ ಕೋರಿದರು.
ಇತ್ತೀಚಿನ ದಿನಗಳಲ್ಲಿ ಕೃಷಿಕರಾಗಿರುವ ಯುವಕರಿಗೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಹಾಗಾಗಿ ಹೆಣ್ಣು ಸಿಗುವಂತೆ ಪ್ರಾರ್ಥಿಸಲು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಅವರು ಪಾದಯಾತ್ರಿಗಳು ಹೇಳಿದರು.
ಪಾದಯಾತ್ರಿಗಳು ಮೊದಲ ದಿನ ಕೊಳ್ಳೇಗಾಲ ತಾಲೂಕಿನ ಸಿಂಗನ್ನಲ್ಲೂರುವರೆಗೆ ನಡೆದು ವಾಸ್ತವ್ಯಹೂಡಿ, ಮಾರನೆ ದಿನ ಹನೂರು ತಾಲೂಕಿನ ಕೌದಳ್ಳಿವರೆಗೆ ನಡೆಯಲಿದ್ದಾರೆ. ನಂತರ ತಾಳುಬೆಟ್ಟ ತಲುಪಿ ದೇವಾಲಯದ ತಲುಪಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ, ಇದು ಗಂಭೀರ ವಿಚಾರ. ಈಚಿನ ದಿನಗಳಲ್ಲಿ ಹಳ್ಳಿಗಳ ಯುವಕರಿಗೆ ಹೆಣ್ಣುಗಳು ಸಿಗುತ್ತಿಲ್ಲ. ದೇವರು ಯುವಕರ ಪ್ರಾರ್ಥನೆ ಈಡೇರಿಸಲು ಎಂದು ಹಾರೈಸಿದರು.
ಮಂಡ್ಯ ಜಿಲ್ಲೆಯಲ್ಲದೆ ರಾಜ್ಯದ ವಿವಿಧೆಡೆಯಿಂದ 30 ವರ್ಷ ಮೀರಿದ ಯುವಕರು ಬಂದಿದ್ದಾರೆ. ಇದಲ್ಲದೆ ಪಕ್ಕದ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಇಬ್ಬರು ಯುವಕರು ಬಂದಿದ್ದಾರೆ ಎಂದು ಪಾದಯಾತ್ರೆ ಆಯೋಜಕರಾದ ಶಿವಪ್ರಸಾದ್ ತಿಳಿಸಿದ್ದಾರೆ.







