ಕೆನಡಾ ಪೌರತ್ವ ತೊರೆಯಲಿರುವ ಅಕ್ಷಯ್ ಕುಮಾರ್: ಭಾರತವೇ ನನಗೆ ಸರ್ವಸ್ವ ಎಂದ ನಟ

ಹೊಸದಿಲ್ಲಿ: ಕೆನಡಾ ಪೌರತ್ವ ಹೊಂದಿರುವುದಕ್ಕೆ ಪದೇ ಪದೇ ಟೀಕೆಗೊಳಗಾಗುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), "ಭಾರತವೇ ನನ್ನ ಪಾಲಿಗೆ ಸರ್ವಸ್ವವಾಗಿದ್ದು, ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ" ಎಂದು ಬಹಿರಂಗಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
Aaj Tak ಸುದ್ದಿ ಸಂಸ್ಥೆಯಲ್ಲಿ ಪ್ರಸಾರವಾಗಲಿರುವ ಹೊಸ ಸರಣಿ 'ಸೀಧಿ ಬಾತ್'ನ ಮೊದಲ ಕಂತಿನಲ್ಲಿ ಸಂದರ್ಶನ ನೀಡಿರುವ ಅಕ್ಷಯ್ ಕುಮಾರ್, ನಾನೇಕೆ ಕೆನಡಾ ಪೌರತ್ವ ಪಡೆಯಬೇಕಾಯಿತು ಎಂಬ ಕಾರಣವರಿಯದೆ ನನ್ನ ಕುರಿತು ಟೀಕಿಸುವಾಗ ನನಗೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ.
"ಭಾರತ ನನ್ನ ಪಾಲಿಗೆ ಸರ್ವಸ್ವವಾಗಿದೆ. ನಾನು ಏನು ಸಂಪಾದಿಸಿದ್ದೇನೆ, ಏನು ಪಡೆದಿದ್ದೇನೆ ಅದೆಲ್ಲವೂ ಭಾರತದಿಂದಲೇ. ಅದೃಷ್ಟವಶಾತ್ ಅದನ್ನು ಮರಳಿಸುವ ಅವಕಾಶ ನನಗೆ ದೊರೆತಿದೆ. ಏನೂ ಅರಿಯದೆ ಜನ ಟೀಕಿಸುವಾಗ ನಿಜಕ್ಕೂ ಬೇಸರವಾಗುತ್ತದೆ" ಎಂದು 55 ವರ್ಷದ ನಟ ಹೇಳಿದ್ದಾರೆ.
ತಮಗೆ ಕೆನಡಾ ಪೌರತ್ವ ಸಿಕ್ಕ ಸನ್ನಿವೇಶದ ಕುರಿತೂ ಪ್ರಸ್ತಾಪಿಸಿರುವ ಅಕ್ಷಯ್ ಕುಮಾರ್, ನನ್ನ ವೃತ್ತಿ ಜೀವನದ ಮೊದಲ ಹದಿನೈದು ಚಿತ್ರಗಳು ಸೋತು ಹೋದವು. ಇದರಿಂದ ಹತಾಶನಾದ ನಾನು ನನ್ನ ಸಿನಿಮಾಗಳು ಗೆಲ್ಲುತ್ತಿಲ್ಲ ಮತ್ತು ನಾನು ಗೆಲ್ಲಬೇಕು ಎಂದು ನನ್ನ ಗೆಳೆಯನಿಗೆ ತಿಳಿಸಿದೆ. ಕೆನಡಾ ಪ್ರಜೆಯಾದ ಆತ, "ಸರಿ ಕೆನಡಾಗೆ ಬಂದು ಬಿಡು" ಎಂದು ಹೇಳಿದ. ನಾನು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ಕೂಡಲೇ ನನಗೆ ಅಲ್ಲಿನ ಪೌರತ್ವ ದೊರೆತು ಬಿಟ್ಟಿತು " ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಆಪ್ತನ ಬಂಧನ: ಬೆಂಬಲಿಗರ ಜತೆಗೂಡಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಸ್ವಘೋಷಿತ ಧಾರ್ಮಿಕ ಮುಖಂಡ