12 ಗಂಟೆ ದುಡಿಮೆ ಮಸೂದೆಗೆ ಕಾರ್ಮಿಕ ಸಂಘಟನೆ ವಿರೋಧ

ಬೆಂಗಳೂರು, ಫೆ.23: ಪ್ರಸಕ್ತ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕಾರ್ಮಿಕ ವಿರೋಧಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ತಿಳಿಸಿದೆ.
ಈ ಕುರಿತು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರವು ಮಹಿಳಾ ಕಾರ್ಮಿಕರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ. ಹಾಗೆಯೇ ದುಡಿಮೆಯ ಅವಧಿಯನ್ನು ದಿನಕ್ಕೆ 12 ಗಂಟೆಗಳವರೆಗೂ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ ಜನತಂತ್ರ ವಿರೋಧಿ ನಡೆ ಎಂದು ಖಂಡಿಸಿದ್ದಾರೆ.
ಮಹಿಳೆಯರ ಸುರಕ್ಷತೆ ಬಗ್ಗೆ ಈಗಾಗಲೇ ಹಲವಾರು ಕಾಯ್ದೆ ಕಾನೂನುಗಳಿದ್ದಾಗಿಯೂ ಮಹಿಳೆಯರ ಮೇಲಿನ ಅಪರಾಧಗಳು ಮೇರೆಮೀರಿದೆ. ರಾತ್ರಿ ಪಾಳಿಯಿಂದಾಗಿ ಇನ್ನಷ್ಟು ಅಭದ್ರತೆ, ಅಸುರಕ್ಷತೆಗೆ ಹೆಣ್ಣು ಮಕ್ಕಳನ್ನು ತಳ್ಳಿದಂತಾಗುತ್ತದೆ ಹಾಗೂ ಹೆಣ್ಣು ಮಕ್ಕಳ ಮೇಲಿನ ಅಪರಾಧಗಳಿಗೆ ಬಲಿಪಶುವಾಗುವಂತಹ ಪರಿಸ್ಥಿತಿಗೆ ದೂಡಿದಂತಾಗುತ್ತದೆ ಎಂದು ಖಂಡಿಸಿದೆ.
ಇನ್ನೊಂದೆಡೆ ದುಡಿಮೆ ಅವಧಿಯನ್ನು 12 ಗಂಟೆಗೆ ವಿಸ್ತರಿಸಿರುವುದು ಕಾರ್ಮಿಕರನ್ನು ಇನ್ನಷ್ಟು ಶೋಷಣೆಗೆ ದೂಡುತ್ತದೆ. ಕಾನೂನು ಬದ್ಧ ಹೆಚ್ಚುವರಿ ಅವಧಿ(ಓಟಿ)ಯನ್ನು ನಿರಾಕರಿಸಿ, ಓಟಿ ಸೌಲಭ್ಯದಿಂದ ವಂಚಿತರನ್ನಾಗಿಸುತ್ತದೆ. 12 ತಾಸು ಕಾರ್ಮಿಕರನ್ನು ದುಡಿಸಿಕೊಳ್ಳುವುದು ಮಾನಸಿಕ ಒತ್ತಡ ಹೆಚ್ಚಿಸುತ್ತದೆ, ಅಲ್ಲದೇ ಅವರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಟೀಕಿಸಿದ್ದಾರೆ.







