ಖರ್ಗೆ ಮುಖ್ಯಮಂತ್ರಿ ಮಾಡಲು ರಾಜಕೀಯ ನಾಯಕರು ವಿಫಲ: ನ್ಯಾ.ಗೋಪಾಲಗೌಡ
‘ಆನ್ ದಿ ರೋಡ್ ಟ್ರೋಡನ್ ಬೈ ಬಾಬಾಸಾಹೇಬ್ ಬಯೋಗ್ರಫಿ ಆಫ್ ಮಲ್ಲಿಕಾರ್ಜುನ ಖರ್ಗೆ’ ಪುಸ್ತಕ ಬಿಡುಗಡೆ

ಬೆಂಗಳೂರು, ಫೆ.23: ಅಂಬೇಡ್ಕರ್ ಅನುಯಾಯಿಯಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ನಮ್ಮ ರಾಜಕೀಯ ನಾಯಕರು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾ. ಗೋಪಾಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಪ್ರೊ. ಮಲ್ಲೇಶ್ವರಂ ಸಾಂಸ್ಕೃತಿಕ ಪ್ರತಿಷ್ಠಾನವು ಆಯೋಜಿಸಿದ್ದ ಎನ್.ತಿರುಮಲೇಶ್ವರ ಭಟ್ಟ ಅನುವಾದಿಸಿದ ‘ಆನ್ ದಿ ರೋಡ್ ಟ್ರೋಡನ್ ಬೈ ಬಾಬಾಸಾಹೇಬ್ ಬಯೋಗ್ರಫಿ ಆಫ್ ಮಲ್ಲಿಕಾರ್ಜುನ ಖರ್ಗೆ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ದೇಶದಲ್ಲಿ ಶೋಷಣೆ ಇನ್ನೂ ನಿಂತಿಲ್ಲ. ಕೆಳ ಸಮುದಾಯಗಳ ಪರ ನ್ಯಾಯ ಸಲ್ಲಿಸಲು ಖರ್ಗೆ ಹೋರಾಡಿದ್ದಾರೆ. ಜಾತ್ಯತೀತ ತತ್ವದಲ್ಲಿ ಬಹಳ ನಂಬಿಕೆ ಇಟ್ಟಿದ್ದಾರೆ. ಹುಸಿ ಜಾತ್ಯತೀತವನ್ನು ಖರ್ಗೆ ಅವರಲ್ಲಿ ನಾನು ಯಾವತ್ತೂ ಕಂಡಿಲ್ಲ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ಮೂರ್ತಿಗಳನ್ನು ಪ್ರತಿ ಗ್ರಾಮದ ಮಧ್ಯ ಭಾಗದಲ್ಲಿ ಸ್ಥಾಪಿಸಬೇಕಿದೆ. ಕಾರಣ ಇವರಿಂದಲೇ ನಮಗೆ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂಬುದು ಪ್ರತಿಯೊಬ್ಬ ನಾಗರಿಕನಿಗೂ ತಿಳಿಯಬೇಕು ಎಂದು ಅವರು ತಿಳಿಸಿದರು.
ಸಂವಿಧಾನ ಬಿಟ್ಟು ನಾವು ಜೀವಂತ ಇರಲು ಸಾಧ್ಯವಿಲ್ಲ. ಆದರೆ, ಇಂದಿನ ರಾಜಕೀಯ ನಾಯಕರೂ ಸಂವಿಧಾನಕ್ಕೆ ಅಪಚಾರ ಎಸಗುವ ರೀತಿ ನಡೆದುಕೊಂಡ ಉದಾಹರಣೆಗಳಿವೆ. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಹೊರತಾಗಿಲ್ಲ ಎಂದು ಅವರು ಹೇಳಿದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ರಾಜಕೀಯ ಮುತ್ಸದ್ದಿ ಎಂದು ಖರ್ಗೆ ಅವರಿಗೆ ಬಳಸುವುದೇ ದೊಡ್ಡ ಗೌರವ. ಖರ್ಗೆ ಅವರು ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ದಲಿತ ಕೋಟಾ ಪರಿಗಣಿಸಿ ನೀಡುವುದಾದರೆ ಬೇಡ ಎಂದು ಹೇಳಿರುವುದು, ಖರ್ಗೆ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ಖರ್ಗೆ ಕರ್ನಾಟಕ ಕಂಡ ಅಗ್ರಗಣ್ಯ ನಾಯಕರಾಗಿದ್ದಾರೆ. ಬಾಬಾಸಾಹೇಬರ ಚಿಂತನೆಗಳನ್ನು ಅಕ್ಷರಶಃ ಅನುಷ್ಠಾನ ಮಾಡಿದವರು ಖರ್ಗೆ ಅವರು. ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ ದೇಶಕ್ಕೆ ದಕ್ಕಬೇಕು. ಆಗ ಭಾರತದ ಚಿತ್ರಣ ಬದಲಾಗುತ್ತದೆ ಎಂದು ಹೇಳಿದರು. ಕಲಬುರಗಿ ವಿಶ್ವ ವಿದ್ಯಾಲಯದ ಪ್ರೊ.ಎಚ್.ಟಿ.ಪೋತೆ ಉಪಸ್ಥಿತರಿದ್ದರು.






.jpg)

