ಪುಂಜಾಲಕಟ್ಟೆ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿ ಸತೀಶ್ ಪೂಜಾರಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ)ದ ನ್ಯಾಯಾಧೀಶರು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಗ್ರಾಮವೊಂದರ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಚೆಗೆ ವಿರುದ್ಧವಾಗಿ 2019ರ ಫೆ.11ರಂದು ಮಧ್ಯಾಹ್ನ 1ಕ್ಕೆ ಆರೋಪಿ ಉಳಿ ಗ್ರಾಮದ ಪುಲ್ಲೇರಿ ಮನೆಯ ಸತೀಶ್ ಪೂಜಾರಿ (35) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ 2019ರ ಮಾರ್ಚ್ 22ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ಆರೋಪಿ ಸತೀಶ್ ಪೂಜಾರಿಯನ್ನು ಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ತನಿಖೆ ನಡೆಸಿ, ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಉಪವಿಭಾಗಧಿಕಾರಿ ಕಚೇರಿಯ ಹೆಚ್‌ಸಿ ಸೀತರಾಮ ಹಾಗೂ ಪಿಸಿ ಸಫೀನಾ ತನಿಖೆಗೆ ಸಹಕರಿಸಿದ್ದರು.
ಗುರುವಾರ ನ್ಯಾಯಾಲಯವು ಆರೋಪಿಗೆ ಬೇರೆ ಬೇರೆ ಕಲಂನಡಿ 10 ವರ್ಷ ಜೈಲುವಾಸ ಹಾಗೂ 10 ಸಾವಿರ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಹನಾ ದೇವಿ ವಾದಿಸಿದ್ದರು.







