ಶೆಹ್ಲಾ ರಶೀದ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

ಹೊಸದಿಲ್ಲಿ, ಫೆ. 23: 2020 ನವೆಂಬರ್‌ನಲ್ಲಿ ಝೀ ಸುದ್ದಿ ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮಕ್ಕೆ ಸಂಬಂಧಿಸಿ ವಾಹಿನಿ ಹಾಗೂ ಅದರ ಆಗಿನ ನಿರೂಪಕ ಸುಧೀರ್ ಚೌಧರಿ(Sudhir Chaudhary) ಬೇಷರತ್ ಕ್ಷಮೆ ಯಾಚಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್(Shehla Rasheed) ಅವರು ಸಲ್ಲಿಸಿದ ಮನವಿಯ ಆಲಿಕೆಯಿಂದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್(M. Singh) ಅವರು ಗುರುವಾರ ಹಿಂದೆ ಸರಿದಿದ್ದಾರೆ.
‘‘ತಂದೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ನನ್ನ ಅಭಿಪ್ರಾಯ ಪಡೆದುಕೊಳ್ಳದೆ ವರದಿ ಪ್ರಸಾರ ಮಾಡುವ ಮೂಲಕ ನನ್ನ ಘನತೆಗೆ ಧಕ್ಕೆ ತರಲಾಗಿದೆ ಎಂದು ಸುದ್ದಿ ಪ್ರಚಾರ ಹಾಗೂ ಜಿಡಿಟಲ್ ಮಾನದಂಡ ಪ್ರಾಧಿಕಾರ (NBDSA)ಕ್ಕೆ ಶೆಹ್ಲಾ ದೂರು ನೀಡಿದ್ದರು. ಈ ರೀತಿ ಏಕಮುಖದ ಸುದ್ದಿ ಪ್ರಸಾರಕ್ಕಾಗಿ ಸುದ್ದಿ ಸಂಸ್ಥೆಗಳು ಕ್ಷಮೆ ಯಾಚಿಸುವಂತೆ ನಿರ್ದೇಶಿಸಬೇಕು ಎಂದು ಶೆಹ್ಲಾ ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದರು. ಆದರೆ, ಪ್ರಾಧಿಕಾರ 2022 ಮಾರ್ಚ್ 31ರಂದು ಶೆಹ್ಲಾ ಕುರಿತ ಎಲ್ಲ ಸುದ್ದಿ ಲಿಂಕ್‌ಗಳನ್ನು ತೆಗೆದು ಹಾಕಬೇಕು ಎಂದು ಮಾತ್ರವೇ ಸುದ್ದಿ ಸಂಸ್ಥೆಗಳಿಗೆ ಸೂಚಿಸಿತ್ತು.
ಕ್ಷಮೆ ಕೇಳುವಂತೆ ಸುದ್ದಿ ಸಂಸ್ಥೆಗಳಿಗೆ ನಿರ್ದೇಶಿಸಿರಲಿಲ್ಲ. ಆದುದರಿಂದ ಈ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಶೆಹ್ಲಾ ರಶೀದ್ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.





