ಹರ್ಯಾಣ:ಮನೇಸರ್ ಪರ ಎರಡನೇ ಹಿಂದು ಮಹಾಪಂಚಾಯತ್: ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ

ಹಥೀನ್,ಫೆ.23: ಗೋ ಕಳ್ಳಸಾಗಾಣಿಕೆ ಆರೋಪದಲ್ಲಿ ನಾಸಿರ್(Nasir) ಮತ್ತು ಜುನೈದ್(Junaid) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋನು ಮನೇಸರ್(Monu Manesar)ನನ್ನು ಬೆಂಬಲಿಸಿ ಹರ್ಯಾಣದ ಹಥೀನ್‌ನಲ್ಲಿ ಬಜರಂಗ ದಳ ಮತ್ತು ವಿಹಿಂಪ ಬುಧವಾರ ಆಯೋಜಿಸಿದ ಎರಡನೇ ಹಿಂದು ಮಹಾಪಂಚಾಯತ್‌ನಲ್ಲಿ ಮುಸ್ಲಿಮರು ಮತ್ತು ಮನೇಸರ್ ವಿರುದ್ಧ ಕ್ರಮಕ್ಕೆ ಮುಂದಾಗುವ ಪೊಲೀಸರ ವಿರುದ್ಧ ಹಿಂಸಾಚಾರಕ್ಕೆ ಬಹಿರಂಗ ಕರೆಗಳನ್ನು ನೀಡಲಾಗಿದೆ.
ಹಥೀನ್ ಕಾರ್ಯಕ್ರಮದಲ್ಲಿ ಉತ್ತರ ಭಾರತದಾದ್ಯಂತದ 400ಕ್ಕೂ ಅಧಿಕ ಬಜರಂಗ ದಳ,ವಿಹಿಂಪ ಮತ್ತು ಹಿಂದು ಸೇನಾ ಕಾರ್ಯಕರ್ತರು ಮತ್ತು ನಾಯಕರು ಭಾಗವಹಿಸಿದ್ದರು. ಸ್ಥಳೀಯರೂ ಈ ಮಹಾಪಂಚಾಯತ್‌ನಲ್ಲಿ ಉಪಸ್ಥಿತರಿದ್ದರು.
ಫೆ.21ರಂದು ಹರ್ಯಾಣದ ಮನೇಸರ್ ಪಟ್ಟಣದಲ್ಲಿ ನಡೆದಿದ್ದ ಮೊದಲ ಹಿಂದು ಮಹಾಪಂಚಾಯತ್‌ನಲ್ಲಿ ಹಲವಾರು ಭಾಷಣಕಾರರು ಬಜರಂಗ ದಳದ ಸದಸ್ಯ ಹಾಗೂ ಗುರ್ಗಾಂವ್‌ನಲ್ಲಿ ಹರ್ಯಾಣ ಸರಕಾರದ ಗೋ ರಕ್ಷಣಾ ಪಡೆಯ ಪ್ರಮುಖನಾಗಿರುವ ಮನು ಮನೇಸರ್ ಬಂಧನದ ವಿರುದ್ಧ ರಾಜಸ್ಥಾನ ಪೊಲೀಸರಿಗೆ ಕಠಿಣ ಎಚ್ಚರಿಕೆಯನ್ನು ನೀಡಿದ್ದರು.
ಗುರುವಾರ ಮಹಾಪಂಚಾಯತ್ ಅಂತ್ಯಗೊಂಡ ಬೆನ್ನಿಗೇ ರಾಜಸ್ಥಾನ ಪೊಲೀಸರು ಪ್ರಕರಣದಲ್ಲಿ ಬೇಕಿರುವ ಎಂಟು ವ್ಯಕ್ತಿಗಳ ಪಟ್ಟಿಯನ್ನು ಅವರ ಚಿತ್ರಗಳೊಂದಿಗೆ ಬಿಡುಗಡೆಗೊಳಿಸಿದ್ದಾರೆ. ಪ್ರಮುಖ ಆರೋಪಿಗಳಾದ ಮೋನು ಮತ್ತು ಲೊಕೇಶ ಸಿಂಘ್ಲಾ ಅವರನ್ನು ಈವರೆಗೆ ಬಂಧಿಸಿರದಿದ್ದರೂ ಪಟ್ಟಿಯಿಂದ ಅವರ ಹೆಸರುಗಳು ಕಾಣೆಯಾಗಿವೆ. ಮೋನು ಮತ್ತು ಸಿಂಘ್ಲಾ ವಿರುದ್ಧ ತನಿಖೆ ಇನ್ನೂ ನಡೆಯುತ್ತಿದೆ ಎಂದು ರಾಜಸ್ಥಾನದ ಭರತಪುರ ಪೊಲೀಸರು ಹೇಳಿದ್ದಾರೆ.
‘ಹರಿದಾಡುತ್ತಿರುವ ಸುದ್ದಿ ದಾರಿ ತಪ್ಪಿಸುವಂಥದ್ದಾಗಿದೆ,ನಾವು ಇದನ್ನು ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ಸ್ಪಷ್ಟ ಪಡಿಸಿದ್ದೇವೆ. ಮೋನು ಈಗಲೂ ಅಪೇಕ್ಷಿತ ವ್ಯಕ್ತಿಯಾಗಿದ್ದಾನೆ ’ ಎಂದು ಭರತಪುರ ಎಸ್‌ಪಿ ಶ್ಯಾಮಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು
ರಾಜಸ್ಥಾನದ ಭರತಪುರ ಜಿಲ್ಲೆಯ ನಿವಾಸಿಗಳಾಗಿದ್ದ ನಾಸಿರ್ ಮತ್ತು ಜುನೈದ್ ಅವರ ಶವಗಳು ಹರ್ಯಾಣದ ಭಿವಾನಿ ಬಳಿ ಸುಟ್ಟುಹೋಗಿದ್ದ ಬೊಲೆರೋ ವಾಹನದಲ್ಲಿ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.







