ಮೂಲ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲ: ಮೊದಲ ಬಾರಿಗೆ ಕೆಕೆಆರ್‍ಡಿಬಿ ಸಿಎಜಿ ವರದಿ ಪ್ರಕಟ

ಬೆಂಗಳೂರು, ಫೆ.23: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಅಸ್ತಿತ್ವಕ್ಕೆ ಬಂದ ಐದು ವರ್ಷಗಳ ನಂತರ ಮೊದಲಬಾರಿಗೆ ಭಾರತೀಯ ಮಹಾ ಲೆಕ್ಕಪರಿಶೋಧಕರ ವರದಿ ಪ್ರಕಟವಾಗಿದೆ.
ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಪರವಾಗಿ ಉನ್ನತಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ವರದಿಯನ್ನು ಮಂಡಿಸಿದರು.
ಶಿಫಾರಸ್ಸುಗಳೇನು?: ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಇದು ಹೊಂದಿತ್ತು. ನೀತಿ ಆಯೋಗದ ಸೂಚ್ಯಂಕಗಳು, ಬಹು ಆಯಾಮದ ಬಡತನ ಸೂಚ್ಯಂಕಗಳು ಇತ್ಯಾದಿ ವಿವಿಧ ಅಭಿವೃದ್ಧಿ ಸೂಚ್ಯಂಕಗಳ ವಿಷಯದಲ್ಲಿ ಗಮನಿಸಿದಾಗ ಪ್ರದೇಶದ ಹಿಂದುಳಿದಿರುವಿಕೆ ಮೊದಲಿನಂತೆಯೇ ಇದೆ ಎಂದು ವರದಿ ಹೇಳಿದೆ.
ಕೆಕೆಆರ್‍ಡಿಬಿ ತನ್ನ ಮೂಲೋದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಲೋಪವನ್ನು ಭಾರತೀಯ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ, ರಾಜ್ಯದ ಉಳಿದೆಡೆ ವಾರ್ಷಿಕ ತಲಾ ಆದಾಯದ ಪ್ರಮಾಣ 2013ರಿಂದ 2020ರ ಅವಧಿಯಲ್ಲಿ ಶೇಕಡಾ 74ರಷ್ಟು ಹೆಚ್ಚಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಕೇವಲ ಶೇಕಡಾ 63.64ರಷ್ಟು ಮಾತ್ರ. ಅದರಲ್ಲೂ ಕಲ್ಯಾಣ ಕರ್ನಾಟಕದ ರಾಜಧಾನಿ ಎಂದೇ ಕರೆಯಬಹುದಾದ ಮಹಾನಗರ ಕಲಬುರ್ಗಿಯ ವಾರ್ಷಿಕ ತಲಾ ಆದಾಯ, ಕಲ್ಯಾಣ ಭಾಗದ ಉಳಿದ ಜಿಲ್ಲೆಗಳಿಗಿಂತ ಅತೀ ಕಡಿಮೆ (ಶೇ 47.96). ಕಲ್ಯಾಣ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣವೂ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ. ರಾಜ್ಯದ ಉಳಿದೆಲ್ಲ ಭಾಗಗಳಲ್ಲಿ ಶಿಶು ಮರಣ ಪ್ರಮಾಣ ಶೇ.11 ರಷ್ಟಿದ್ದರೆ, ಈ ಭಾಗವೊಂದರಲ್ಲೇ ಶೇ.12ರಷ್ಟಿರುವ ಗಂಭೀರ ಸಂಗತಿ ವರದಿಯಲ್ಲಿದೆ.







