ರಿಯೋ ಓಪನ್ ಸೋಲಿನ ಬೆನ್ನಿಗೆ ಬ್ರೆಝಿಲ್‌ನ ಥಾಮಸ್ ಬೆಲುಸಿ ನಿವೃತ್ತಿ

ರಿಯೋ ಡಿ ಜನೈರೊ, ಫೆ.23: ಕಳೆದ ದಶಕದಲ್ಲಿ ಪುರುಷರ ಟೆನಿಸ್ ಟೂರ್‌ನಲ್ಲಿ ಬ್ರೆಝಿಲ್‌ನ ಪ್ರಮುಖ ಧ್ವಜಧಾರಿಯಾಗಿರುವ ಥಾಮಸ್ ಬೆಲುಸಿ ರಿಯೋ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳ ಅಂತರದಿಂದ ಸೋತ ಬೆನ್ನಿಗೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಬೆಲುಸಿ ಆರನೇ ಶ್ರೇಯಾಂಕದ ಸೆಬಾಸ್ಟಿಯನ್ ಬಯೆಝ್ ವಿರುದ್ಧ 3-6, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. 35ರ ಹರೆಯದ ಬೆಲುಸಿ ಇದೀಗ ಕೋಚಿಂಗ್‌ನತ್ತ ಗಮನ ಹರಿಸಲು ಸಿದ್ಧರಾಗಿದ್ದಾರೆ.
ಬೆಲುಸಿ ತನ್ನ ವೃತ್ತಿಜೀವನದಲ್ಲಿ 200 ವೃತ್ತಿಪರ ಪಂದ್ಯಗಳನ್ನು ಜಯಿಸಿದ್ದಾರೆ. 4 ಪ್ರಶಸ್ತಿಗಳನ್ನು ಎತ್ತಿ ಹಿಡಿದಿರುವ ಬೆಲುಸಿ ಎಟಿಪಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 21ನೇ ಸ್ಥಾನಕ್ಕೆ ತಲುಪಿದ್ದಾರೆ. ನೊವಾಕ್ ಜೊಕೊವಿಕ್ ವಿರುದ್ಧ ಆವೆಮಣ್ಣಿನ ಅಂಗಣದಲ್ಲಿ 6-0 ಅಂತರದಿಂದ ಸೆಟನ್ನು ಜಯಿಸಿರುವ ಐವರು ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಅಗ್ರ-10 ಆಟಗಾರರನ್ನು ಆರು ಬಾರಿ ಸೋಲಿಸಿದ್ದಾರೆ. 2011ರಲ್ಲಿ ಮ್ಯಾಡ್ರಿಡ್ ಓಪನ್‌ನಲ್ಲಿ ವಿಶ್ವದ ನಂ.1 ಆ್ಯಂಡಿ ಮರ್ರೆ ವಿರುದ್ಧವೂ ಜಯ ದಾಖಲಿಸಿದ್ದರು. ತನ್ನ ಕ್ರೀಡಾ ಹೀರೊ, ಮೂರು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ ಮಾಜಿ ನಂ.1 ಗುಸ್ಟಾವೊ ಕುರ್ಟೆನ್ ಸಕ್ರಿಯವಾಗಿರುವಾಗಲೇ ಬೆಲುಸಿ 2005ರಲ್ಲಿ ವೃತ್ತಿಪರ ಆಟಗಾರನಾಗಿ ಬದಲಾದರು.





