‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ಕ್ಕೆ ಸರ್ವಾನುಮತದ ಅಂಗೀಕಾರ

ಬೆಂಗಳೂರು, ಫೆ.23: ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉದ್ದೇಶಿಸಿರುವ ‘2022ನೆ ಸಾಲಿನ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ವನ್ನು ಗುರುವಾರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಮಂಡಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಕನ್ನಡ ಭಾಷೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವಲ್ಲಿ ಸೂಕ್ತ ಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಸಂಯೋಜಿಸಲು ಸಮರ್ಪಕವಾದ ಕಾನೂನಿನ ಅಗತ್ಯವಿದೆ ಎಂದರು.
ರಾಝ್ಯದಲ್ಲಿ ಜಮೀನು, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯುತ್ತಿರುವ ಎಲ್ಲ ಕೈಗಾರಿಕೆಗಳು ಮತ್ತು ಇತರೆ ಕಾರ್ಯಸಂಸ್ಥೆಗಳಲ್ಲಿ ಮತ್ತು ಇತರೆ ಕೈಗಾರಿಕೆ ಮತ್ತು ಕಾರ್ಯಸಂಸ್ಥೆಗಳಲ್ಲಿಯೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸುವ ಸಲುವಾಗಿ ಮತ್ತು ಅಧಿನಿಯಮದ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡಲು, ತನಿಖಾ ಅಧಿಕಾರಗಳೊಂದಿಗೆ ಒಂದು ಕಾರ್ಯವ್ಯವಸ್ಥೆ ಒದಗಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಕಾನೂನು ಆಯೋಗವು ತನ್ನ 57ನೆ ವರದಿಯಲ್ಲಿ ಈ ಕುರಿತು ಶಾಸನವೊಂದನ್ನು ರಚಿಸಲು ಪ್ರಸ್ತಾಪಿಸಿದೆ.ಈ ಎಲ್ಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜಭಾಷಾ ಅಧಿನಿಯಮ-1963, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳು(ಅಧಿಕೃತ ಭಾಷೆ)-1981 ಇವುಗಳನ್ನು ನಿರಸನಗೊಳಿಸುವುದರ ಮೂಲಕ ನೂತನವಾಗಿ 2022ನೆ ಸಾಲಿನ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ವಿಧೇಯಕದ ಉದ್ದೇಶಗಳು:
1.ಉನ್ನತ, ತಾಂತ್ರಿಕ, ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಚಯಿಸುವುದು.
2.ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವುದು.
3.ರಾಜ್ಯ ಸರಕಾರ, ರಾಜ್ಯದಲ್ಲಿನ ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನೇತರ ನಿಕಾಯಗಳು ಮತ್ತು ಸಹಕಾರಿ ಸಂಘಗಳು ಹಾಗೂ ಇತರ ಸಂಘಗಳಲ್ಲಿ ಉದ್ಯೋಗವನ್ನು ಪಡೆಯಲು ಕನ್ನಡ ಭಾಷೆಯನ್ನು ಅತ್ಯವಶ್ಯಕ ಭಾಷೆಯಾಗಿ ಪರಿಚಯಿಸುವುದು.
4.ಅಧೀನ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ, ಬ್ಯಾಂಕುಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಬಳಸುವುದು, 5.ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಚಾರಕ್ಕಾಗಿ ಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳುವುದು, 6.ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು, 7.ಕನ್ನಡ ಭಾಷೆ ಅಭಿವೃದ್ಧಿಗಾಗಿ ಪ್ರೋತ್ಸಾಹಕಗಳನ್ನು ನೀಡುವುದು.
8.ರಾಜ್ಯದಲ್ಲಿ ಅಧಿಸೂಚಿಸಿರುವ ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲ ಕೈಗಾರಿಕೆಗಳು ಸರಕಾರದಿಂದ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಕ್ಕನನು ನೀಡುವುದು, 9.ಉದ್ಯೋಗ ಪೋರ್ಟಲ್ ಅನ್ನು ಸ್ಥಾಪಿಸುವುದು, 10.ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ(ಸಮಿತಿಗಳು/ಜಾರಿ ಅಧಿಕಾರಿಗಳ) ಕಾರ್ಯವ್ಯವಸ್ಥೆಯನ್ನು ಸ್ಥಾಪಿಸುವುದು ಹಾಗೂ 11.ಸರಕಾರಿ ಅಧಿಕಾರಿಗಳು/ಸಾರ್ವಜನಿಕರಿಂದ ಈ ಅಧಿನಿಯಮದ ಉಪಬಂಧಗಳ ಅನುಷ್ಠಾನದ ಉಲ್ಲಂಘನೆಗಾಗಿ ದಂಡವನ್ನು ವಿಧಿಸುವುದು.
ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆ: ಸಚಿವಾಲಯದ ಪ್ರತಿಯೊಂದು ಇಲಾಖೆಯ ಅಧೀನದಲ್ಲಿ ಬರುವ ಮತ್ತು ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಅಧಿಕಾರಿಗಳು ಸೇರಿದಂತೆ ರಾಜ್ಯ ಸರಕಾರದ ಪ್ರತಿಯೊಂದು ಕಚೇರಿಯೂ ಈ ಅಧಿನಿಯಮದ ಉಪಬಂಧಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡ ಬಳಕೆಗಾಗಿ ಸಾರ್ವಜನಿಕ ಸಂಪರ್ಕಕ್ಕೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿರುವ ತನ್ನ ಕಾರ್ಯ ನೀತಿಗಳಲ್ಲಿ ಸೂಕ್ತ ಉಪಬಂಧಗಳನ್ನು ಕಲ್ಪಿಸಿಕೊಳ್ಳಬೇಕು.
ರಾಜ್ಯಮಟ್ಟದ ಜಾರಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು, ಉಪಾಧ್ಯಕ್ಷರಾಗಿ ಸರಕಾರದ ಮುಖ್ಯ ಕಾರ್ಯದರ್ಶಿ, ಸದಸ್ಯರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಹಾಗೂ ಸಂಚಾಲಕರಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಇರುತ್ತಾರೆ. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಯೊಬ್ಬರನ್ನು ಆಹ್ವಾನಿತರನ್ನಾಗಿ ನೇಮಿಸಲಾಗುತ್ತದೆ.
ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಮಟ್ಟದ ಸಮಿತಿಗೆ ಉಪ ವಿಭಾಗಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಗ್ರಾಮ ಪಂಚಾಯತಿ ಮಟ್ಟದ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನೇತೃತ್ವ ಇರುತ್ತದೆ.
ದಂಡ: ರಾಜ್ಯದಲ್ಲಿ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲ ಕೈಗಾರಿಕಾ ಹಾಗೂ ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರಬೇಕು. ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿ ಕನ್ನಡ ಭಾಷೆಯ ಶೇಕಡವಾರು ಪ್ರಮಾಣ ಸರಕಾರ ನಿಗದಿಪಡಿಸಿದಂತೆ ಇರಬೇಕು.
ರಾಜ್ಯದೊಳಗಿನ 100ಕ್ಕಿಂತಲೂ ಹಎಚ್ಚಿನ ಉದ್ಯೋಗಿಗಳನ್ನು ಹೊಂದಿರುವ ರಾಜ್ಯ ಮತ್ತು ಕೇಂದ್ರ ಸರಕಾರದ ಒಡೆತನದ ಪ್ರತಿಯೊಂದು ಕೈಗಾರಿಕಾ ಸಂಸ್ಥೆ, ಸಾರ್ವಜನಿಕ ವಲಯ ಉದ್ಯಮ, ಬ್ಯಾಂಕ್ ಮತ್ತು ಖಾಸಗಿ ಕೈಗಾರಿಕೆಗಳು ದಿನನಿತ್ಯದ ಕಾರ್ಯಗಳಿಗೆ ಕನ್ನಡ ಭಾಷೆಯ ಬಳಕೆಗಾಗಿ ‘ಕನ್ನಡ ಕೋಶ’ ಸ್ಥಾಪಿಸಬೇಕು. ಕನ್ನಡ ಭಾಷೆ ಮಾತನಾಡಲು ಬಾರದಿರುವ ಉದ್ಯೋಗಿಗಳಿಗಾಗಿ ‘ಕನ್ನಡ ಕಲಿಕಾ ಘಟಕ’ ಸ್ಥಾಪಿಸಬೇಕು.
ಬ್ಯಾಂಕುಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕರೊಂದಿಗೆ ತನ್ನ ಎಲ್ಲ ಸಂಪರ್ಕ ಹಾಗೂ ಪತ್ರ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು. ತಪ್ಪಿದ್ದಲ್ಲಿ ಮೊದಲನೆ ಅಪರಾಧಕ್ಕಾಗಿ 5 ಸಾವಿರ ರೂ., ಎರಡನೆ ಅಪರಾಧಕ್ಕಾಗಿ 10 ಸಾವಿರ ರೂ., ನಂತರದ ಅಪರಾಧಕ್ಕಾಗಿ 20 ಸಾವಿರೂ.ವರೆಗೆ ವಿಸ್ತರಿಸಬಹುದಾದ ದಂಡ ಮತ್ತು ಪರವಾನಗಿಯನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ.







