ರಾಹುಲ್ ಬೆಂಬಲಕ್ಕೆ ನಿಂತ ರೋಹಿತ್: ಗಂಭೀರ್ ಶ್ಲಾಘನೆ

ಮುಂಬೈ, ಫೆ.23: ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಟೀಮ್ ಇಂಡಿಯಾದ ಬ್ಯಾಟರ್ ಕೆ.ಎಲ್.ರಾಹುಲ್ ಅವರ ಪರ ನಿಂತ ರೋಹಿತ್ ಶರ್ಮಾ ನಿರ್ಧಾರವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಅಟಗಾರ ಗೌತಮ್ ಗಂಭೀರ್ ಶ್ಲಾಘಿಸಿದರು.
‘ಕೆಲವೊಮ್ಮೆ ನಾವು ಪ್ರತಿಭೆಗಳನ್ನು ಬೆಂಬಲಿಸಬೇಕಾಗುತ್ತದೆ. ಕೆ.ಎಲ್.ರಾಹುಲ್‌ರನ್ನು ಬೆಂಬಲಿಸಿದ ರೋಹಿತ್ ಶರ್ಮಾರನ್ನು ನಾನು ಪ್ರಶಂಸಿಸುತ್ತೇನೆ. ಅವರ ವೃತ್ತಿಜೀವನವೂ ಆರಂಭದಲ್ಲಿ ಇದೇ ರೀತಿ ಇತ್ತು. ಈಗ ರೋಹಿತ್ ಶರ್ಮಾ ಎಂತಹ ಆಟಗಾರರಾಗಿದ್ದಾರೆ ಎನ್ನುವುದನ್ನು ನೋಡಬಹುದು’’ ಎಂದು ಗಂಭೀರ್ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಾಹುಲ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ್ದ ಟೀಮ್ ಇಂಡಿಯದ ನಾಯಕ ರೋಹಿತ್ ಶರ್ಮಾ, ‘ಅವರ ಬ್ಯಾಟಿಂಗ್ ಕುರಿತಂತೆ ಹಲವು ಮಾತುಗಳು ಕೇಳಿಬರುತ್ತಿವೆ. ಆದರೆ ನಾನಾಗಲಿ, ತಂಡದ ಆಡಳಿತ ಮಂಡಳಿಯಾಗಲಿ, ಬ್ಯಾಟರ್ ಸಾಮರ್ಥ್ಯವನ್ನು ಪರಿಗಣಿಸುತ್ತೇವೆ. ರನ್ ಗಳಿಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಗುತ್ತದೆ. ಅದು ರಾಹುಲ್‌ಗೆ ಮಾತ್ರವಲ್ಲ’’ ಎಂದು ಹೇಳಿದ್ದರು.
ರಾಹುಲ್ ಕಳೆದ 10 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಗಳಿಸಿದ ಗರಿಷ್ಠ ಮೊತ್ತ 23 ರನ್ ಆಗಿತ್ತು. ವೆಂಕಟೇಶ್ ಪ್ರಸಾದ್, ಕೆ. ಶ್ರೀಕಾಂತ್ ಸೇರಿದಂತೆ ಮಾಜಿ ಕ್ರಿಕೆಟಿಗರು ವೈಫಲ್ಯದ ನಡುವೆಯೂ ರಾಹುಲ್‌ಗೆ ಅವಕಾಶ ನೀಡುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.







