ಜಿಎಸ್ಟಿ ವಂಚನೆ: 11,914 ಪ್ರಕರಣಗಳು ದಾಖಲು; ಸಿಎಂ ಬೊಮ್ಮಾಯಿ

ಬೆಂಗಳೂರು, ಫೆ. 23: ರಾಜ್ಯದಲ್ಲಿ ಸರಕು ಸೇವಾ ತೆರಿಗೆ(ಜಿಎಸ್ಟಿ)ಯನ್ನು ವಂಚನೆ ಸಂಬಂಧ ತಪ್ಪಿತಸ್ಥರಿಂದ 1,819 ಕೋಟಿ ರೂ.ಹಣವನ್ನು ಪತ್ತೆ ಮಾಡಲಾಗಿದ್ದು, ಈ ಸಂಬಂಧ 11,914 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಗುರುವಾರ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪರವಾಗಿ ಎಂ. ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಜಿಎಸ್‍ಟಿ ಸಂಗ್ರಹದಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಅಧಿಕಾರಿಗಳ ದಕ್ಷತೆ, ತಂತ್ರಜ್ಞಾನ ಅಳವಡಿಕೆ, ವಿಚಕ್ಷಣ ದಳ ಹೆಚ್ಚು ಮಾಡಿರುವ ಹಿನ್ನೆಲೆಯಲ್ಲಿ 1,819 ಕೋಟಿ ರೂ. ಮೊತ್ತದ ಜಿಎಸ್‍ಟಿ ವಂಚನೆಯನ್ನು ಪತ್ತೆ ಹಚ್ಚಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದರಲ್ಲಿ 648.85 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಇನ್ನುಳಿದ 497.98 ಕೋಟಿ ರೂ. ತೆರಿಗೆ, 19.34 ಕೋಟಿ ರೂ. ಬಡ್ಡಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವರು ಹಲವಾರು ಕಂಪೆನಿಗಳನ್ನು ತೆರೆದು ಜಿಎಸ್‍ಟಿ ವಿನಾಯ್ತಿಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನ ನಡೆಸಿದರೂ ಅಂತಹವುಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
'ಪ್ರತಿದಿನ 8 ಕೋಟಿ ರೂ.ಜಿಎಸ್‍ಟಿ ಸಂಗ್ರಹ: ರಾಜ್ಯದಲ್ಲಿ ವಿಚಕ್ಷಣ ದಳವನ್ನು ಮತ್ತಷ್ಟು ಬಿಗಿಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿದಿನ 8ಕೋಟಿ ರೂ.ಗಳಿಗೂ ಅಧಿಕ ಜಿಎಸ್‍ಟಿ ಸಂಗ್ರಹವಾಗುತ್ತಿದೆ. ದೇಶ ವಿದೇಶಗಳಿಂದ ಬರುವ ಸ್ಕ್ರಾಪ್ ಅನ್ನು ಮಂಗಳೂರಿನಿಂದ ದೆಹಲಿ ತನಕ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿ 80-100 ಕೋಟಿ ರೂ. ಮೊತ್ತದ ತೆರಿಗೆ ಬರುವಂತೆ ನೋಡಿಕೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ವರ್ತಕರು ವಂಚನೆ ಮಾಡದಂತೆ ನೋಡಿಕೊಳ್ಳಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ'
-ಬಸವರಾಜ್ ಬೊಮ್ಮಾಯಿ. ಮುಖ್ಯಮಂತ್ರಿ







