ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ

ಹೊಸದಿಲ್ಲಿ, ಫೆ. 23: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ(K. Palaniswami) ಅವರು ಎಐಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಅನುಮತಿ ನೀಡುವ ಮದ್ರಾಸ್ ಉಚ್ಚ ನ್ಯಾಯಾಲಯ(Madras High Court)ದ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court)ಗುರುವಾರ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ(Dinesh Maheshwari) ಹಾಗೂ ಹೃಷಿಕೇಶ್ ರಾಯ್(Hrishikesh Roy) ಅವರನ್ನೊಳಗೊಂಡ ವಿಭಾಗೀಯ ಪೀಠ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ. ಕಳೆದ ವರ್ಷ ಜುಲೈ 11ರಂದು ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಿತ್ತು.
ಇದನ್ನು ಪ್ರಶ್ನಿಸಿ ಪನ್ನೀರ್ ಸೆಲ್ವಂ ಸಲ್ಲಿಸಿದ ಅರ್ಜಿಯನ್ನು ಸೆಪ್ಟಂಬರ್ 2ರಂದು ವಿಚಾರಣೆ ನಡೆಸಿದ್ದ ಮದ್ರಾಸ್ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಪಳನಿಸ್ವಾಮಿ ನೇಮಕವನ್ನು ಸಿಂಧುಗೊಳಿಸಿತ್ತು. ಪಳನಿಸ್ವಾಮಿ ಅವರ ಏಕ ನಾಯಕನ ಬೇಡಿಕೆಯನ್ನು ಕೂಡ ಮಾನ್ಯ ಮಾಡಿತ್ತು. ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ಪನ್ನೀರ್‌ಸೆಲ್ವಂ ಅವರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.





