ಅಮೆರಿಕಾದಲ್ಲಿ ದ್ವೇಷಾಪರಾಧ ಕೃತ್ಯಕ್ಕೆ ಸಿಖ್, ಯೆಹೂದಿಗಳೇ ಟಾರ್ಗೆಟ್: FBI

ವಾಷಿಂಗ್ಟನ್, ಫೆ.23: ಅಮೆರಿಕದಲ್ಲಿ 2021ರಲ್ಲಿ ನಡೆದ ದ್ವೇಷ ಪ್ರೇರಿತ ಅಪರಾಧದಲ್ಲಿ ಹೆಚ್ಚಿನವು ಸಿಖ್ ಮತ್ತು ಯೆಹೂದಿ ಧಾರ್ಮಿಕ ಗುಂಪುಗಳನ್ನು ಗುರಿಯಾಗಿಸಿ ನಡೆದಿವೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ)ಯ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2021ರಲ್ಲಿ ಧರ್ಮಕ್ಕೆ ಸಂಬಂಧಿಸಿದ 1,005 ದ್ವೇಷಾಪರಾಧ ಪ್ರಕರಣ ವರದಿಯಾಗಿದೆ. ಇದರಲ್ಲಿ 31.9%ದಷ್ಟು ಯೆಹೂದಿ ವಿರೋಧಿ ಘಟನೆಗಳಾಗಿದ್ದರೆ, 21.3%ದಷ್ಟು ಸಿಖ್ ವಿರೋಧಿ ಘಟನೆಗಳಾಗಿವೆ. 9.5%ದಷ್ಟು ಮುಸ್ಲಿಮ್ ವಿರೋಧಿ, 6.1%ದಷ್ಟು ಕ್ಯಾಥೊಲಿಕ್ ವಿರೋದಿ, 6.6%ದಷ್ಟು ಆರ್ಥೊಡಾಕ್ಸ್ ಕ್ಯಾಥೊಲಿಕ್ ವಿರೋಧಿ ಘಟನೆಗಳಾಗಿವೆ ಎಂದು ವರದಿ ಹೇಳಿದೆ. ಕಾನೂನು ಜಾರಿ ಏಜೆನ್ಸಿಗಳು ಒಟ್ಟು 7,262 ಘಟನೆಗಳು ಮತ್ತು 9,024 ಸಂತ್ರಸ್ತರ ಬಗ್ಗೆ ವರದಿ ಮಾಡಿದ್ದು , ದ್ವೇಷಾಪರಾಧ ಪ್ರಕರಣ ದೇಶದಾದ್ಯಂತದ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 2021ರಲ್ಲಿ ನಡೆದ ಅಪರಾಧ ಕೃತ್ಯಗಳಲ್ಲಿ 64.8%ದಷ್ಟು ಬಲಿಪಶುಗಳು ಜನಾಂಗ/ಜನಾಂಗೀಯತೆ/ ಪೂರ್ವಜರ ಮೇಲಿನ ದ್ವೇಷದ ಕಾರಣಕ್ಕೆ ದಾಳಿಗೆ ಒಳಗಾಗಿದ್ದಾರೆ. ಪೂರ್ವಗ್ರಹ ಪೀಡಿತ ಅಪರಾಧ ಪ್ರಕರಣಗಳಲ್ಲಿ ಕಪ್ಪುವರ್ಣ ವಿರೋಧಿ ಅಥವಾ ಆಫ್ರಿಕನ್ ಅಮೆರಿಕನ್ ದ್ವೇಷ ಅಪರಾಧಗಳು 63.2%ದಷ್ಟಾಗಿದ್ದು ಇದು 2021ರಲ್ಲಿ ಪೂರ್ವಗ್ರಹ ಪೀಡಿತ ಅಪರಾಧ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಏಶ್ಯನ್ ವಿರೋಧಿ ಪ್ರಕರಣಗಳು 4.3%ದಷ್ಟಿವೆ. ಹಿಸ್ಪಾನಿಕ್ ವಿರೋಧಿ ದ್ವೇಷಾಪರಾಧ ಪ್ರಕರಣ 6.1%ರಷ್ಟು, ಬಿಳಿಯರ ವಿರೋಧಿ ಪ್ರಕರಣ 13.4%ದಷ್ಟಿವೆ ಎಂದು ವರದಿ ಹೇಳಿದೆ.