ಬಿಜೆಪಿಗೆ ಮುಳುವಾಗಲಿದೆಯೆ ಆಂತರಿಕ ಕಚ್ಚಾಟ, ಕಿತ್ತಾಟ?
ದಿ ಬಿಗ್ ಫೈಟ್

ಸಮ್ಮಿಶ್ರ ಸರಕಾರ ಉರುಳಿಸುವಲ್ಲಿ ಗೆದ್ದ ನಿರಾಣಿಗೆ ಸೋಲಿನ ಭೀತಿಯೆ? ಪಕ್ಷದೊಳಗೇ ಇರುವ ಕಚ್ಚಾಟ, ಕಿತ್ತಾಟಗಳು ಕಂಟಕವಾಗಿ ಕಾಡಲಿವೆಯೆ? ಮತ್ತೆ ತನ್ನ ಭದ್ರಕೋಟೆಯನ್ನು ಗೆದ್ದುಕೊಳ್ಳಲು ಕಾಂಗ್ರೆಸ್ ತಂತ್ರವೇನು? ಬೀಳಗಿ ಕ್ಷೇತ್ರದಲ್ಲಿ ಜನರ ಅಸಮಾಧಾನವೇನು? ಏನಿರಲಿದೆ ತೀರ್ಮಾನ?
ಬೀಳಗಿ ವಿಧಾನಸಭಾ ಕ್ಷೇತ್ರ
ಉದ್ಯಮಿ. ಬಿಜೆಪಿ ನಾಯಕ. ಪ್ರಸಕ್ತ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕ. ಬೊಮ್ಮಾಯಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ. ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕರಾಗಿರುವ ನಿರಾಣಿ, ಅದೇ ಕಾರಣಕ್ಕೆ ಬಹಳ ಸಲ ಸುದ್ದಿಯಲ್ಲಿದ್ದುದೂ ಇದೆ. ಕೈಹಿಡಿದ ಕ್ಷೇತ್ರವನ್ನು ಈ ಬಾರಿ ತೊರೆಯಲಿದ್ದಾರೆ ಎಂಬ ವದಂತಿಗಳೂ ಇದ್ದವು. ಆದರೆ ಬೀಳಗಿಯಿಂದಲೇ ಸ್ಪರ್ಧೆ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದೂ ಆಗಿದೆ.
ಬಾಗಲಕೋಟೆ ಜಿಲ್ಲೆಯ ಪ್ರಭಾವಿ ಕ್ಷೇತ್ರ ಬೀಳಗಿ. ಸಮೃದ್ಧ ನೀರಾವರಿಗೆ ಹೆಸರಾಗಿರುವಂತೆಯೇ, ಆಲಮಟ್ಟಿ ಮುಳುಗಡೆ ಸಂತ್ರಸ್ತರ ಸಂಕಷ್ಟವನ್ನೂ ಎದುರಿಸುತ್ತಿದೆ. ಈಚೆಗೆ ಬಿಜೆಪಿ ಪಾಲಾಗುತ್ತಿರುವ ಈವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ೯ ಬಾರಿ ಗೆದ್ದರೆ, ಬಿಜೆಪಿ ೩ ಬಾರಿ ಗೆಲುವು ಕಂಡಿದೆ. ಕುರುಬ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರ ಇದು.
ಎರಡೇ ಪಕ್ಷಗಳ ಪೈಪೋಟಿ
ಇತ್ತೀಚೆಗೆ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆಯಿರುವುದು ಮುರುಗೇಶ್ ನಿರಾಣಿ ಮತ್ತು ಕಾಂಗ್ರೆಸ್‌ನ ಜೆ.ಟಿ. ಪಾಟೀಲರ ನಡುವೆ. ಕ್ಷೇತ್ರದಲ್ಲಿ ಮುರುಗೇಶ್ ನಿರಾಣಿಯವರು ೨೦೦೪, ೨೦೦೮ ಹಾಗೂ ೨೦೧೮ರಲ್ಲಿ ಗೆಲುವು ಕಂಡಿದ್ದಾರೆ. ಜೆ.ಟಿ. ಪಾಟೀಲರು ೧೯೯೪, ೧೯೯೯, ೨೦೧೩ರಲ್ಲಿ ಜಯ ಗಳಿಸಿದ್ದಾರೆ.
೨೦೧೮ರ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ, ಮುರುಗೇಶ್ ನಿರಾಣಿ ತಮ್ಮ ನಿಕಟ ಪ್ರತಿಸ್ಪರ್ಧಿ ಜೆ.ಟಿ. ಪಾಟೀಲರ ವಿರುದ್ಧ ಗೆದ್ದಿದ್ದು ಕೇವಲ ೪,೯೦೦ ಮತಗಳ ಅಂತರದಿಂದ.
ಇಲ್ಲಿ ಇನ್ನಾವುದೇ ಪಕ್ಷಕ್ಕೆ ನೆಲೆಯಿಲ್ಲದಿರುವ ಹಿನ್ನೆಲೆಯಲ್ಲಿ ಪೈಪೋಟಿಯೇನಿದ್ದರೂ ಕಾಂಗ್ರೆಸ್-ಬಿಜೆಪಿ ಮಧ್ಯೆ ಮಾತ್ರ.
ಹೆಚ್ಚಿರುವ ಟಿಕೆಟ್ ಆಕಾಂಕ್ಷಿಗಳು
ಕ್ಷೇತ್ರದಿಂದ ಗೆದ್ದು ಸಚಿವರೂ ಆಗಿರುವ ನಿರಾಣಿ ಅವರಿಗೆ ಪಕ್ಷದಲ್ಲಿಯೂ ಪೈಪೋಟಿಯಿದೆ. ಈ ಬಾರಿ ಅವರೊಂದಿಗೆ ಬಸವರಾಜ ಯಂಕಂಚಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿ ಜೆ.ಟಿ. ಪಾಟೀಲರಿಗೇ ಟಿಕೆಟ್ ಪಕ್ಕಾ ಎನ್ನುವಂತಿದೆ. ಮಾಜಿ ಶಾಸಕರಾಗಿರುವ ಅವರತ್ತ ಪಕ್ಷದ ಒಲವಿರುವುದು ಸಹಜವೇ. ಅವರೂ ಕಳೆದ ಬಾರಿಯ ಸೋಲನ್ನು ಈ ಬಾರಿ ಜಯವಾಗಿ ಪರಿವರ್ತಿಸುವ ಹಠದಲ್ಲಿದ್ದಾರೆ. ಆದರೆ ಈ ನಡುವೆ, ಕಾಂಗ್ರೆಸ್‌ನ ಮತ್ತೋರ್ವ ಹಿರಿಯ ನಾಯಕ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಬೀಳಗಿ ಹಾಗೂ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಟಿಕೆಟ್‌ಗಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ. ಅಂತಿಮವಾಗಿ ಬೀಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡಲಿದೆ ಎಂದು ನೋಡಬೇಕಿದೆ.
ಕಾಡಲಿದೆಯೆ ಕಿತ್ತಾಟ?
ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳ ಪೈಕಿ ೫ರಲ್ಲಿ ಗೆದ್ದಿರುವ ಬಿಜೆಪಿ, ಈ ಚುನಾವಣೆಯ ಹೊತ್ತಿಗೆ ಕಚ್ಚಾಟ, ಕಿತ್ತಾಟಗಳ ರಣಕಣವೇ ಆಗಿದೆ. ನಾಯಕರ ನಡುವೆಯೇ ಭಿನ್ನಮತ. ಅವಕಾಶ ಸಿಕ್ಕಾಗಲೆಲ್ಲ ಪರಸ್ಪರ ವಾಗ್ದಾಳಿ.
ಇನ್ನು ನಿರಾಣಿ, ಯತ್ನಾಳ್ ಕೆಸರೆರಚಾಟವಂತೂ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯೇ ಆಗಿಹೋಯಿತು. ಇವರಿಬ್ಬರ ಕಿತ್ತಾಟ ತೀರಾ ಅಸಭ್ಯ ಭಾಷೆಯ ಬಳಕೆಯವರೆಗೂ ಮುಟ್ಟಿದ್ದು, ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿಸಿ ಬಿಜೆಪಿಯ ಮೇಲೆ ಮುಗಿಬಿದ್ದಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸಮಾಜದ ಸ್ವಾಮೀಜಿಗಳು ಹಾಗೂ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ಇವೆಲ್ಲವೂ ಇವೆ.
ಇದಲ್ಲದೆ, ಕ್ಷೇತ್ರದ ಹಲವು ಬೂತ್‌ಗಳಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪವೂ ಇದೆ.
ನಿರಾಣಿ ಪ್ಲಸ್, ಮೈನಸ್ ಏನು?
ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ನೀರಾವರಿ ಯೋಜನೆಗಳ ಅನುಷ್ಠಾನ, ವಿದ್ಯುತ್ ಕೇಂದ್ರಗಳ ಸ್ಥಾಪನೆ ನಿರಾಣಿಗೆ ಈ ಬಾರಿಯ ಎಲೆಕ್ಷನ್ ಅಜೆಂಡ. ಆದರೆ ಇದೇ ವೇಳೆ, ಅವರಿಗೆ ಮೈನಸ್ ಆಗಿ ಕಾಡಲಿರುವ ಸಂಗತಿಗಳೂ ಹಲವಾರು ಇವೆ. ಬಾದಾಮಿ ತಾಲೂಕಿನ ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ, ಭೂಸ್ವಾಧೀನ ವಿವಾದವಿದೆ. ಗ್ಲಾಸ್ ಫ್ಯಾಕ್ಟರಿ ಸ್ಥಾಪನೆಗಾಗಿ ೨ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ರೈತರ ವಿರೋಧ ಎದುರಾಗಿದೆ. ಎಕರೆಗೆ ೧೮ ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದ್ದು, ಕೆಲವರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಆದರೆ ಭೂಸ್ವಾಧೀನ ವಿವಾದ ಇನ್ನೂ ತಣ್ಣಗಾಗಿಲ್ಲ.
ಮುರುಗೇಶ್ ನಿರಾಣಿ ಕಾಂಗ್ರೆಸ್ - ಜೆಡಿಎಸ್ ಸಮಿಶ್ರ ಸರಕಾರ ಕೆಡವಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಹಾಗಾಗಿ, ಅಡ್ಡದಾರಿಯಲ್ಲಿ ಯಶಸ್ಸು ಸಾಧಿಸುವ ರಾಜಕಾರಣಿ ಎಂಬ ಹಣೆಪಟ್ಟಿಯೂ ಅಂಟಿದೆ.

ಸದ್ಯದ ಪರಿಸ್ಥಿತಿ
ಬೀಳಗಿ ಕ್ಷೇತ್ರದಲ್ಲಿ ನಿರಾಣಿ ಪರ ಬಹಳ ಅಸಮಾಧಾನವೇ ಕಂಡುಬರುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ನಿರಾಣಿ ಪರ ವಿದ್ಯಾರ್ಥಿಗಳಿಗೆ ಗಿಫ್ಟ್ ಹಂಚಲು ಹೊದಾಗ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಮಹಿಳೆ ಆ ಗಿಫ್ಟ್ ತಿರಸ್ಕರಿಸಿ, ಸಚಿವ ನಿರಾಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಸುದ್ದಿಯಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಅಲರಾಂ ಗಡಿಯಾರ ಹಂಚಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯೂ ಆಯಿತು. ಅದಾದ ಬಳಿಕ ಗಿಫ್ಟ್ ಹಂಚಿಕೆ ನಿಂತಿದೆ. ಇದರಿಂದ ನಿರಾಣಿ ಅವರಿಗೆ ಸಾರ್ವಜನಿಕವಾಗಿ ಮುಜುಗರವಾಗಿರುವುದಂತೂ ನಿಜ.
ಪಕ್ಷದೊಳಗೇ ಕೆಲ ನಾಯಕರು ಈ ಬಾರಿ ನಿರಾಣಿಯವರನ್ನು ಸೋಲಿಸಲು ಸಿದ್ಧವಾಗಿದ್ದಾರೆ ಎಂಬ ಮಾತುಗಳೂ ಇವೆ. ಕಳೆದ ಚುನಾವಣೆಯಲ್ಲಿ ನಿರಾಣಿ ಗೆದ್ದ ಕಡಿಮೆ ಅಂತರ ನೋಡಿದರೆ, ಈ ಸಲ ಅವರಿಗೆ ಜಯ ಕಠಿಣ ಎಂದೇ ಹೇಳಬಹುದು.







