ಇಂದಿನ ರಾಯ್‌ಪುರ ಕಾಂಗ್ರೆಸ್ ಸಮಾವೇಶದಿಂದ ದೂರ ಉಳಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ

ಹೊಸದಿಲ್ಲಿ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ಶುಕ್ರವಾರ ನಡೆಯುವ ಕಾಂಗ್ರೆಸ್ ನ ಹಾಥ್ ಸೇ ಹಾಥ್ ಜೋಡೊ ಅಧಿವೇಶನದ ಪ್ರಮುಖ ಸಭೆಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಅವರು ಗೈರು ಹಾಜರಾಗಲಿದ್ದು, ಈ ಸಭೆಯಲ್ಲಿ ಪಕ್ಷದ ಉನ್ನತ ಮಂಡಳಿಯಾದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸುವ ಕುರಿತು ಚರ್ಚಿಸಲಾಗುತ್ತದೆ.
ಮೂಲಗಳ ಪ್ರಕಾರ, ಹೊಸ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಹಾಗೂ ನಿರ್ಧಾರಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಿರಲು ಗಾಂಧಿ ಕುಟುಂಬ ಬಯಸಿದೆ. ಆದಾಗ್ಯೂ, ಅವರು 2024 ರ ರಾಷ್ಟ್ರೀಯ ಚುನಾವಣೆ ಚರ್ಚೆ ನಡೆಯುವ ಸಮಾವೇಶದ ಉಳಿದ ಸಭೆಗೆ ಹಾಜರಾಗುತ್ತಾರೆ.
ಒಂದರ ಹಿಂದೊಂದರಂತೆ ಚುನಾವಣಾ ಸೋಲುಗಳು, ಪ್ರಮುಖ ನಾಯಕರ ನಿರ್ಗಮನದ ನಂತರ ಸೋನಿಯಾ ಗಾಂಧಿ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆಯವರಿಗೆ 137 ವರ್ಷಗಳ ಹಿಂದಿನ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರು. ಪಕ್ಷದ ಮೊದಲ ಕುಟುಂಬವೆಂದು ಪರಿಗಣಿಸಲ್ಪಟ್ಟ ಗಾಂಧಿ ಪರಿವಾರ ಪಕ್ಷದ ಮೇಲೆ ಗಟ್ಟಿಯಾದ ಹಿಡಿತವನ್ನು ಹೊಂದಿದ್ದಾರೆ.
ರಾಯ್‌ಪುರದಲ್ಲಿ ನಡೆಯಲಿರುವ ಸಭೆಯು ಕಾಂಗ್ರೆಸ್‌ನ 85ನೇ ಪೂರ್ಣ ಸಭೆಯಾಗಿದೆ. ಮೂರು ದಿನಗಳ ಅಧಿವೇಶನದಲ್ಲಿ ಪಕ್ಷವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ, ಅದು 2024 ರ ಲೋಕಸಭೆ ಚುನಾವಣೆಗೆ ಮಾರ್ಗಸೂಚಿಯನ್ನು ರೂಪಿಸುತ್ತದೆ ಹಾಗೂ ಬಿಜೆಪಿಯನ್ನು ಎದುರಿಸಲು ಇತರ ವಿರೋಧ ಪಕ್ಷಗಳೊಂದಿಗೆ ಚುನಾವಣಾ ಸಂಬಂಧಕ್ಕಾಗಿ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದೆ.
ಗಾಂಧಿ ಕುಟುಂಬ ಹಾಜರಾಗದೆ ಇರುವ ಸಂಚಾಲನಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಅನುಮೋದಿಸಲಿದ್ದಾರೆ ಹಾಗೂ ಅವರ ನೇತೃತ್ವದ ಹೊಸ ಕಾರ್ಯಕಾರಿ ಸಮಿತಿಗೆ ದಾರಿ ಮಾಡಿ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಬೃಹತ್ ಕಾಲ್ನಡಿಗೆಯ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಅಧಿವೇಶನದಲ್ಲಿ ಸುಮಾರು 15,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.







