ದಿಲ್ಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗೆ ಹೊಸ ಚುನಾವಣೆ: ಮೇಯರ್ ಶೆಲ್ಲಿ ಒಬೆರಾಯ್ ಘೋಷಣೆ

ಹೊಸದಿಲ್ಲಿ: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸ್ಥಾಯಿ ಸಮಿತಿಗೆ ಆರು ಸದಸ್ಯರನ್ನು ಆಯ್ಕೆ ಮಾಡಲು ಹೊಸ ಚುನಾವಣೆ ನಡೆಸಲಾಗುವುದು ಎಂದು ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ಶುಕ್ರವಾರ ಘೋಷಿಸಿದರು.
ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವ ಕುರಿತಾಗಿ ಎಎಪಿ ಹಾಗೂ ಬಿಜೆಪಿ ಕೌನ್ಸಿಲರ್‌ಗಳ ನಡುವೆ ಬುಧವಾರ ಮಾತಿನ ಚಕಮಕಿ ನಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮತಗಟ್ಟೆಯಲ್ಲಿ ಫೋನ್‌ಗಳಿಗೆ ಅವಕಾಶ ನೀಡಿರುವ ಮೇಯರ್ ಶೆಲ್ಲಿ ಒಬೆರಾಯ್ ವಿರುದ್ಧ ಬಿಜೆಪಿ ಕೌನ್ಸಿಲರ್‌ಗಳು ಪ್ರತಿಭಟನೆ ನಡೆಸಿ ಹೊಸ ಚುನಾವಣೆಗೆ ಒತ್ತಾಯಿಸಿದರು.
ಮತದಾನದ ಸಮಯದಲ್ಲಿ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಶೆಲ್ಲಿ ಒಬೆರಾಯ್ ಘೋಷಿಸಿದ್ದಾರೆ. ಬಿಜೆಪಿ ಕೌನ್ಸಿಲರ್‌ಗಳು ಮೇಯರ್ ಅವರ ಘೋಷಣೆಯನ್ನು ಸ್ವಾಗತಿಸಿ, ಇದು ತಮ್ಮ ವಿಜಯ ಎಂದು ಹೇಳಿಕೊಂಡಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿ ಕೌನ್ಸಿಲರ್‌ಗಳು ಎಂಸಿಡಿ ಹೌಸ್‌ನಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ಅವರನ್ನು ಸಿವಿಕ್ ಸೆಂಟರ್ ಗೆ ಬರುವಂತೆ ಹೇಳಿ ಘೋಷಣೆಗಳನ್ನು ಕೂಗಿದರು.
ಏತನ್ಮಧ್ಯೆ, ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಎಎಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಶಾಸಕಿ ಅತಿಶಿ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಚುನಾವಣೆಯಲ್ಲಿ ಎಎಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.







