ರಾಜ್ಯ ವಕ್ಫ್ ಮಂಡಳಿಯಿಂದ ಉಳ್ಳಾಲ ದರ್ಗಾಕ್ಕೆ ಅಕ್ರಮ ಚುನಾವಣೆ ನಡೆಸಲು ಪ್ರಯತ್ನ: ದರ್ಗಾ ಅಧ್ಯಕ್ಷರ ಆರೋಪ

ಮಂಗಳೂರು, ಫೆ.24: ಕಳೆದ ಕೆಲವು ವರ್ಷದಿಂದ ರಾಜ್ಯ ವಕ್ಫ್ ಮಂಡಳಿಯು ಉಳ್ಳಾಲ ದರ್ಗಾ ಮತ್ತು ಜುಮಾ ಮಸ್ಜಿದ್‌ನ ಆಡಳಿತ ಸಮಿತಿಗೆ ಅಕ್ರಮವಾಗಿ ಚುನಾವಣೆ ನಡೆಸಲು ಪ್ರಯತ್ನಿಸುತ್ತಲೇ ಇದೆ. ಈ ಬಾರಿ 7 ಸಾವಿರ ಅರ್ಜಿ ವಿತರಿಸಿದ್ದಾರೆ. 3526 ಮಂದಿ ಸದಸ್ಯರಾಗಿದ್ದಾರೆ. ಒಂದು ವಿಭಾಗಕ್ಕೆ ಸೇರಿದವರಿಂದಲೇ ಅರ್ಜಿ ಪಡೆದು ಆರ್ಥಿಕ ಸಂಪನ್ಮೂಲವನ್ನು ಅವರೇ ಭರಿಸಿ ಸದಸ್ಯರನ್ನಾಗಿಸಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಆರೋಪಿಸಿದ್ದಾರೆ.
ದರ್ಗಾ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11 ಸದಸ್ಯರೆಂದು ಮನವಿ ಮಾಡಿದ ಬಳಿಕ ಸದಸ್ಯ ಸ್ಥಾನವನ್ನು 33ಕ್ಕೇರಿಸಲಾಗಿತ್ತು. ಈಗ 55ಕ್ಕೇರಿಸಿ ಮೀಸಲು ತೆಗೆದು ಸಮಿತಿಗೂ ತಿಳಿಸದೆ ಚುನಾವಣೆಗೆ ಮುಂದಾಗಿ ಉಳ್ಳಾಲ ಜನತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹಾಗಾಗಿ ನಾವು ಈ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದರು.
ನ್ಯಾಯ ಸಮ್ಮತವಲ್ಲದ ಚುನಾವಣೆಯನ್ನು ನಮ್ಮ ಮೇಲೆ ಹೇರಲಾಗಿದೆ. ಬೈಲಾ ಅಂಗೀಕರಿಸಿದ ಬಳಿಕ ಚುನಾವಣೆಗೆ ಮುಂದಾಗಬೇಕಿತ್ತು. ಆದರೆ ಅವರೇ ಬೈಲಾ ತಯಾರಿಸಿರುವುದು ಕರ್ನಾಟಕ ವಕ್ಫ್ ಮಂಡಳಿ ನಿಯಮಕ್ಕೆ ವಿರುದ್ಧವಾಗಿದೆ. ಚುನಾವಣೆ ಕಡ್ಡಾಯ ಎನಿಸಿದರೂ ಕೂಡ ಹಾಲಿ ಆಡಳಿತ ಸಮಿತಿಯ ಸಮ್ಮತಿ ಪಡೆದು ಚುನಾವಣೆ ನಡೆಸಬೇಕಿತ್ತು. ಆದರೆ ವಕ್ಫ್ ಮಂಡಳಿ ನಾನೇ ರಾಜ ಎನ್ನುವಂತೆ ಮೆರೆದಾಡಿದೆ ಎಂದು ಹಾಜಿ ಅಬ್ದುಲ್ ರಶೀದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉರೂಸ್ ಬಳಿಕ ಆರು ತಿಂಗಳು ಅಧಿಕಾರ ಇರುತ್ತದೆ. ಕೊರೋನದಿಂದ ಹೊಸ ಆಡಳಿತ ಸಮಿತಿ ಚುನಾವಣೆ ತಡವಾಗಿದೆ. ಆದರೂ ಈಗಾಗಲೇ ಮಹಾಸಭೆ ನಡೆಸಿ ಮುಂದಿನ ತಿಂಗಳು ಚುನಾವಣೆಗೆ ಸಜ್ಜಾಗಲಾಗಿತ್ತು. ಕಳೆದ ಉರೂಸ್ ಕಾರ್ಯಕ್ರಮಕ್ಕೆ ಬಂದಿದ್ದ ವಕ್ಫ್ ಅಧ್ಯಕ್ಷರು, ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅತ್ಯತ್ತಮ ದರ್ಗಾ ಮತ್ತು ಮಸೀದಿ ಸಮಿತಿಯೆಂದು ಪ್ರಮಾಣ ಪತ್ರ ನೀಡಿದ್ದು ಮರೆತರಾ? ಮೌಲಾನಾ ಅಧ್ಯಕ್ಷರಾಗಿದ್ದರಿಂದ ಅವರ ಮೇಲೆ ವಿಶ್ವಾಸವಿತ್ತು, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡುವಂತೆ ಕೇಳಿದ್ದೆವು. ಭರವಸೆ ನೀಡುತ್ತಾ ಬಂದು ಬಳಿಕ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಬೇಸತ್ತು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದರು.
ದರ್ಗಾ ಅಧೀನದಲ್ಲಿ ಇಷ್ಟೊಂದು ಕಟ್ಟಡಗಳಿರುವಾಗ ಭಾರತ್ ಶಾಲೆಯಲ್ಲಿ ಯಾತಕ್ಕಾಗಿ ಚುನಾವಣೆಗೆ ಮುಂದಾದರು? ಈಗ ಒಂಭತ್ತು ಕೆರೆಯ ಸರಕಾರಿ ಶಾಲೆಯಲ್ಲಿ ಚುನಾವಣೆಯೆಂದು ಪ್ರಕಟನೆ ನೀಡಲಾಗಿದೆ. ಇದರ ಹಿಂದಿರುವ ಉದ್ದೇಶವೇನು? ಶಾಫಿ ಸಅದಿ ವಿರುದ್ಧ ಆಲಂ ಪಾಶ ಆರೋಪ ಮಾಡಿದ್ದಾರೆ. ಅವರ ಮೇಲೆ ಆಗಾಗ ಆರೋಪ ಕೇಳಿಬರುತ್ತಲೇ ಇರುತ್ತದೆ. ದರ್ಗಾ ಅಧ್ಯಕ್ಷರಾಗಿದ್ದ ಇಬ್ರಾಹೀಂ ಅವರ ಕಾಲದಲ್ಲೇ ಇಲ್ಲಿನ ಆರ್ಥಿಕ ಸಂಪನ್ಮೂಲ ಕೊಂಡೊಯ್ಯಲು ಪ್ರಯತ್ನ ನಡೆದಿತ್ತು. ಆದರೆ ಅವರೊಂದಿಗೆ ಯು.ಟಿ.ಫರೀದ್, ಅಝೀಝ್ ಶೇಠ್‌ರಂತಹ ನಾಯಕರಿದ್ದ ಕಾರಣ ಏನೂ ಮಾಡಲಾಗಿಲ್ಲ ಎಂದು ಹಾಜಿ ಅಬ್ದುಲ್ ರಶೀದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ, ಉಪಾಧ್ಯಕ್ಷ ಬಾವ ಮುಹಮ್ಮದ್, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ವಕ್ತಾರ ಫಾರೂಕ್ ಉಳ್ಳಾಲ್, ಸದಸ್ಯರಾದ ಖಾದರ್ ಮುಸ್ಲಿಯಾರ್, ಹಸನಬ್ಬ ಕಡಪ್ಪರ, ಇಬ್ರಾಹೀಂ ಉಳ್ಳಾಲಬೈಲ್ ಉಪಸ್ಥಿತರಿದ್ದರು.