ಮೂಡುಬಿದಿರೆ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿ ಉದ್ಘಾಟನೆ
ಫೆ. 26: ಸರ್ವಧರ್ಮೀಯರಿಗೆ 'ನಮ್ಮೂರ ಮಸೀದಿ ನೋಡ ಬನ್ನಿ' ವಿಶಿಷ್ಟ ಕಾರ್ಯಕ್ರಮ

ಮೂಡುಬಿದಿರೆ: ಪುತ್ತಿಗೆ ನೂರಾನಿ ಮಸೀದಿಯ ನವೀಕೃತ ಕಟ್ಟಡವನ್ನು ಮಂಗಳೂರಿನ ಕುದ್ರೋಳಿಯ ಜೋಡುಪಳ್ಳಿ ಜಾಮಿಯಾ ಮಸೀದಿಯ ಮೌಲಾನಾ ಝುಬೇರ್ ಖಾನ್ ನದ್ವಿ ಶುಕ್ರವಾರ ಉದ್ಘಾಟಿಸಿದರು.
ಉದ್ಯಮಿ ಮೊಹಮ್ಮದ್ ಸಲೀಂ ತೊಕ್ಕೊಟ್ಟು, ಭಾರತ್ ಕನ್ಸ್ಟ್ರಕ್ಷನ್ ನ ಮುಸ್ತಫಾ ಮೂಡುಬಿದಿರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಮಸೀದಿ ಸಮಿತಿಯ ಗೌರವಾಧ್ಯಕ್ಷ ಹುಸೇನ್ ಶೇಕ್, ಉಪಾಧ್ಯಕ್ಷ ಬಶೀರ್ ಶೇಕ್, ಕಾರ್ಯದರ್ಶಿ ಮುಹಮ್ಮದ್ ಖಯ್ಯೂಮ್, ಕೋಶಾಧಿಕಾರಿ ಮುಸ್ತಾಕ್ ಸಾಹೇಬ್ ಉಪಸ್ಥಿತರಿದ್ದರು.
ಉದ್ಘಾಟಕರಾಗಿ ಆಗಮಿಸಿದ ಮೌಲಾನಾ ಝುಬೇರ್ ಖಾನ್ ನದ್ವಿ ಖುತ್ಬಾ ನೆರವೇರಿಸಿ, ಜುಮಾ ನಮಾಝಿನ ನೇತೃತ್ವ ವಹಿಸಿದರು. ಪುತ್ತಿಗೆ ಮಸೀದಿಯ ಇಮಾಮ್ ಝಿಯಾವುಲ್ಲಾ ಖಾನ್ ಸ್ವಾಗತಿಸಿದರು. ಅಧ್ಯಕ್ಷರಾದ ಅಬುಲ್ ಅಲಾ ಪುತ್ತಿಗೆ ಧನ್ಯವಾದ ಸಲ್ಲಿಸಿದರು.
ನವೀಕೃತಗೊಂಡು ಶುಕ್ರವಾರ ಅಧಿಕೃತವಾಗಿ ಉದ್ಘಾಟನೆಯಾದ ಪುತ್ತಿಗೆ ನೂರಾನಿ ಮಸೀದಿಯ ಆಡಳಿತ ಸಮಿತಿ ಫೆ. 26 ರಂದು ರವಿವಾರ ಇಡೀ ಊರಿನ ಸರ್ವಧರ್ಮೀಯರಿಗಾಗಿ 'ನಮ್ಮೂರ ಮಸೀದಿ ನೋಡ ಬನ್ನಿ' ಎಂಬ ವಿಶೇಷ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಳಗ್ಗೆ 10 ಗಂಟೆಗೆ ನೂತನ ಮಸೀದಿ ಆವರಣದಲ್ಲಿ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ . ಮೋಹನ್ ಆಳ್ವ, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ್ ಭಟ್, ಪಕ್ಷಿಕೆರೆ ಸಂತ ಜೂದರ ಧರ್ಮ ಕೇಂದ್ರ ಹಾಗು ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂ. ಸ್ವಾಮಿ ಮೆಲ್ವಿನ್ ನೊರೊನ್ಹಾ ಹಾಗು ನವೀಕೃತ ನೂರಾನಿ ಮಸೀದಿಯ ಖತೀಬ್ ಹಾಗು ಇಮಾಮ್ ಮೌಲಾನಾ ಝಿಯಾಉಲ್ಲಾ ಖಾನ್ ಅವರು ಸೌಹಾರ್ದ ಸಂದೇಶ ನೀಡಲಿದ್ದಾರೆ.
ಪಳಕಳ ಮಿತ್ರಮಂಡಳಿಯ ಅಧ್ಯಕ್ಷ ರವಿಶಂಕರ್ ಭಟ್, ನೂರಾನಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಖಯ್ಯೂಮ್, ಪುತ್ತಿಗೆ ಪಂಚಾಯತ್ ಸದಸ್ಯ ಮೊಹಮ್ಮದ್ ಶರೀಫ್ ಉಪಸ್ಥಿತರಿರುತ್ತಾರೆ.
ನೂರಾನಿ ಮಸೀದಿಯ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಊರಿನ ಸರ್ವಧರ್ಮೀಯ ಸ್ತ್ರೀ ಪುರುಷರು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ನೂತನ ಮಸೀದಿ ವೀಕ್ಷಿಸಬಹುದು ಎಂದು ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಆಮಂತ್ರಿಸಿದ್ದಾರೆ.