ನಿವೃತ್ತ ಗೂರ್ಖಾ ಸೈನಿಕನ ಪೌರತ್ವ ಪ್ರಶ್ನಿಸಿದ ಚುನಾವಣಾಧಿಕಾರಿಗೆ ಗುವಾಹಟಿ ಹೈಕೋರ್ಟ್ ದಂಡ
ಗುವಾಹಟಿ, ಫೆ. 24: ನಿವೃತ್ತ ಗೂರ್ಖಾ ಸೈನಿಕರೊಬ್ಬರ ಪೌರತ್ವವನ್ನು ಪ್ರಶ್ನಿಸಿ ಅವರನ್ನು ವಿದೇಶೀಯರ ನ್ಯಾಯಮಂಡಳಿಯ ವಿಚಾರಣೆಗೆ ಶಿಫಾರಸು ಮಾಡಿರುವ ಚುನಾವಣಾ ನೋಂದಣಾಧಿಕಾರಿಗೆ ಗುವಾಹಟಿ ಹೈಕೋರ್ಟ್ 10,000 ರೂಪಾಯಿ ದಂಡ ವಿಧಿಸಿದೆ ಎಂದು ‘ಈಸ್ಟ್ ಮೋಜೊ’ ಗುರುವಾರ ವರದಿ ಮಾಡಿದೆ.
ಫೆಬ್ರವರಿ 20ರಂದು ತೀರ್ಪು ನೀಡಿರುವ ಹೈಕೋರ್ಟ್, ದಿಸ್ಪುರ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಛೀಮಾರಿ ಹಾಕಿತು ಮತ್ತು 85 ವರ್ಷದ ಜಗತ್ ಬಹಾದುರ್ ಚೇತ್ರಿಯನ್ನು ಅಕ್ರಮ ವಲಸಿಗ ಎಂಬುದಾಗಿ ಘೋಷಿಸಿದ ವಿದೇಶೀಯರ ನ್ಯಾಯಮಂಡಳಿಯ 2012ರ ತೀರ್ಪನ್ನು ರದ್ದುಪಡಿಸಿತು.
ಚೇತ್ರಿ ಗುವಾಹಟಿಯಲ್ಲಿರುವ ನರೆಂಗಿ ಸೇನಾ ಕಂಟೋನ್ಮಂಟರ್ ವ್ಯಾಪ್ತಿಯಲ್ಲಿ ಬರುವ ಸತ್ಗಾಂವ್ ಎಂಬಲ್ಲಿರುವ ಭಾರತೀಯ ಸೇನೆಯ 14 ಫೀಲ್ಡ್ ಸ್ಫೋಟಕ ಡಿಪೊದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತಿ ಹೊಂದಿದ್ದರು. 1997ರಲ್ಲಿ ಪ್ರಕಟಗೊಂಡ ಮತದಾರರ ಪಟ್ಟಿಯಲ್ಲಿ ಅವರನ್ನು ‘ಡಿ-ವೋಟರ್’ ಅಂದರೆ ಸಂಶಯಾಸ್ಪದ ಮತದಾರ ಎಂಬುದಾಗಿ ಗುರುತಿಸಲಾಗಿತ್ತು.
ಚೇತ್ರಿ 1937ರಲ್ಲಿ ಅಸ್ಸಾಮ್ನ ದಿಬ್ರೂಗಢ್ನಲ್ಲಿ ಜನಿಸಿದರು ಎಂಬುದಾಗಿ ಇನ್ನೋರ್ವ ಸರಕಾರಿ ಅಧಿಕಾರಿ ಖಚಿತಪಡಿಸಿದ ಹೊರತಾಗಿಯೂ, ಚುನಾವಣಾಧಿಕಾರಿಯು ಅವರನ್ನು ‘ಡಿ-ವೋಟರ್’ ಎಂಬುದಾಗಿ ಗುರುತಿಸಿದ್ದರು.
‘‘ಅರ್ಜಿದಾರನನ್ನು ವಿದೇಶೀಯರ ನ್ಯಾಯಮಂಡಳಿಗೆ ಶಿಫಾರಸು ಮಾಡಿರುವುದು, 52 ದಿಸ್ಪುರ್ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಾಣಾಧಿಕಾರಿಯ ದಿವ್ಯ ನಿರ್ಲಕ್ಷವಾಗಿದೆ. ಆ ಅಧಿಕಾರಿಯು ತನ್ನ ತಲೆಯನ್ನು ಉಪಯೋಗಿಸಲೇ ಇಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ’’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
1985ರ ಅಸ್ಸಾಮ್ ಒಪ್ಪಂದದ ಪ್ರಕಾರ, 1971 ಮಾರ್ಚ್ 25ರ ಬಳಿಕ ಅಸ್ಸಾಮ್ ಪ್ರವೇಶಿಸಿದವರನ್ನು, ಅವರ ಬಳಿ ತಾವು ಅಕ್ರಮ ವಲಸಿಗರು ಅಲ್ಲ ಎನ್ನುವುದನ್ನು ಸಾಬೀತುಪಡಿಸುವ ದಾಖಲೆಗಳು ಇಲ್ಲದಿದ್ದರೆ ಅಕ್ರಮ ವಲಸಿಗರು ಎಂಬುದಾಗಿ ಘೋಷಿಸಬಹುದಾಗಿದೆ.
► ‘ವಿದೇಶೀಯರ ನ್ಯಾಯಮಂಡಳಿಯ ವಿಚಾರಣೆ ನನ್ನ ಗೂರ್ಖಾ ಜನಾಂಗಕ್ಕೆ ಮಾಡಿದ ಅವಮಾನ’
‘‘ನನ್ನನ್ನು ವಿದೇಶೀಯರ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಿರುವುದು ನನ್ನ ಗೂರ್ಖಾ ಜನಾಂಗೀಯ ಗುರುತಿಗೆ ಮಾಡಿದ ಅವಮಾನವಾಗಿದೆ. ನಾನು ಭಾರತೀಯನಾಗಿ ಜನಿಸಿದ್ದೇನೆ. ಇನ್ನು ಭಾರತೀಯನಾಗಿಯೇ ಸಾಯಲು ಸಂತೋಷಪಡುತ್ತೇನೆ’’ ಎಂದು ‘ಈಸ್ಟ್ ಮೋಜೊ’ ಜೊತೆಗೆ ಮಾತನಾಡಿದ ಚೇತ್ರಿ ಹೇಳಿದರು.