11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಸ್ಪರ್ಧೆ: ಕರ್ನಾಟಕ ತಂಡಕ್ಕೆ 2000 ಮೀ. ಸೇರಿದಂತೆ 3ರಲ್ಲಿ ಚಿನ್ನದ ಪದಕ

ಉಡುಪಿ: ಇಲ್ಲಿಗೆ ಸಮೀಪದ ಹೇರೂರು ಗ್ರಾಮದಲ್ಲಿ ಹರಿಯುವ ಸುವರ್ಣ ನದಿಯ ಉಪನದಿಯಾದ ಮಡಿಸಾಲು ಹೊಳೆಯಲ್ಲಿ ಇಂದು ಅಧಿಕೃತವಾಗಿ ಪ್ರಾರಂಭಗೊಂಡ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್‌ನ ಚೊಚ್ಚಲ ಫೈನಲ್‌ನಲ್ಲಿ ಆತಿಥೇಯ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ದಿನದಲ್ಲಿ ಕರ್ನಾಟಕ ತಂಡ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿವೆ.
ಶುಕ್ರವಾರ ರಾ.ಹೆದ್ದಾರಿ 66ರಲ್ಲಿರುವ ಹೇರೂರು ಸೇತುವೆ ಸಮೀಪ ನಡೆದ ಪುರುಷರ 2000ಮೀ. ಸ್ಪರ್ಧೆಯ ಡಿ-20 (20+2) ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ತಂಡ 10ನಿ. 29.73 ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಚಾಂಪಿಯನ್ ತಂಡ ಹೊರಹೊಮ್ಮಿತು.
ಮಧ್ಯಪ್ರದೇಶ ತಂಡದ ಆಟಗಾರರು 10ನಿ.53.41ಸೆ.ಗಳಲ್ಲಿ ಬೋಟನ್ನು ಗುರಿಮುಟ್ಟಿಸುವ ಮೂಲಕ ಎರಡನೇ ಸ್ಥಾನ ಪಡೆದರೆ, ದಿಲ್ಲಿ ತಂಡ 10ನಿ.53.73ಸೆ.ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಿಯಾಯಿತು. ನಾಲ್ಕನೇ ಸ್ಥಾನವನ್ನು ಹರ್ಯಾಣ ತಂಡ ಪಡೆಯಿತು.
2000 ಮೀ. ಸ್ಪರ್ಧೆಯ ಡಿ-10 (10+2) ಮಿಕ್ಸೆಡ್ ಫೈನಲ್‌ನಲ್ಲಿ ದಿಲ್ಲಿ ತಂಡ ಚಿನ್ನದ ಪದಕ ಪಡೆಯಿತು. ಅದು 11ನಿ.56.15ಸೆ.ಗಳಲ್ಲಿ ಮೊದಲಿಗ ರಾಗಿ ಗುರಿ ಮುಟ್ಟಿತು. 12ನಿ.02ಸೆ.ಗಳೊಂದಿಗೆ ಪಂಜಾಬ್ ತಂಡ ಎರಡನೇ ಹಾಗೂ 12ನಿ 02.36ಸೆ.ಗಳೊಂದಿಗೆ ಕರ್ನಾಟಕ ತಂಡ ಮೂರನೇ ಸ್ಥಾನ ಗೆದ್ದುಕೊಂಡಿತು. ಉಳಿದಂತೆ ಹರ್ಯಾಣ ನಾಲ್ಕನೇ, ಮಧ್ಯಪ್ರದೇಶ ಐದನೇ ಸ್ಥಾನಗಳನ್ನು ಪಡೆದವು.
2000ಮೀ. ನ ಡಿ-10ರ ಮಹಿಳೆಯರ ಫೈನಲ್‌ನಲ್ಲಿ 12ನಿ.33.36ಸೆ.ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ ಮಧ್ಯಪ್ರದೇಶದ ಮಹಿಳೆಯರು ಚಿನ್ನದ ಪದಕ ಪಡೆದರೆ, ದಿಲ್ಲಿ ಮಹಿಳೆಯರು ಬೆಳ್ಳಿ ಪದಕ (12ನಿ.55.38ಸೆ.) ಹಾಗೂ ಪಂಜಾಬ್ ತಂಡ ಕಂಚಿನ ಪದಕ (13ನಿ.18.93ಸೆ.) ಗೆದ್ದುಕೊಂಡವು. ಆತಿಥೇಯ ಕರ್ನಾಟಕ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಕರ್ನಾಟಕಕ್ಕೆ ಚಿನ್ನ: 2000ಮೀ.ಮಿಕ್ಸೆಡ್‌ನ ಡಿ-20ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ತಂಡ ಚಿನ್ನದ ಪದಕ ಪಡೆಯಿತು. ತಂಡ 10ನಿ.49.48 ಸೆ.ಗಳಲ್ಲಿ ಪ್ರಥಮವಾಗಿ ಗುರಿ ಮುಟ್ಟಿದರು.ಹರ್ಯಾಣ ತಂಡ ಬೆಳ್ಳಿ ಹಾಗೂ ಪಂಜಾಬ್ ತಂಡ ಇದರಲ್ಲಿ ಕಂಚಿನ ಪದಕ ಜಯಿಸಿದವು.
2000ಮೀ.ನ ಡಿ-10 ಪುರುಷರ ಪೈನಲ್‌ನಲ್ಲೂ ಆತಿಥೇಯ ತಂಡ ಚಿನ್ನದ ನಗುಬೀರಿತು. ಕರ್ನಾಟಕದ ಪುರುಷರು 11ನಿ.27.95ಸೆ.ಗಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.ಪಂಜಾಬ್ ತಂಡ ಎರಡನೇ ಹಾಗೂ ಗೋವಾ ತಂಡ ಮೂರನೇ ಸ್ಥಾನಗಳನ್ನು ಗೆದ್ದುಕೊಂಡವು.
ಪುರುಷರ ಜೂನಿಯರ್ 2000 ಮೀ.ನ ಡಿ-10ರ ಫೈನಲ್‌ನಲ್ಲಿ ಮಧ್ಯಪ್ರದೇಶ ಚಿನ್ನ, ಹರ್ಯಾಣ ಬೆಳ್ಳಿ ಹಾಗೂ ಕೇರಳ ಕಂಚಿನ ಪದಕ ಗೆದ್ದುಕೊಂಡವು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು, ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್,ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಈ ಡ್ರ್ಯಾಗನ್ ಬೋಟ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿವೆ.