ನಾನು ಆಡಳಿತದಲ್ಲಿರುವ ವಿರೋಧ ಪಕ್ಷದ ಶಾಸಕ ಎಂದ ಯತ್ನಾಳ್
''ಯಡಿಯೂರಪ್ಪ ಬಗ್ಗೆ ವೈಮನಸ್ಸು ಇರಬಹುದು, ಆದರೆ...''

ಬೆಂಗಳೂರು: 'ನಾನು ಆಡಳಿತದಲ್ಲಿರುವ ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡಿದೆ. ನಮ್ಮ ಮತಕ್ಷೇತ್ರದ ಜನ ನನಗೆ ಎರಡು ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆ, ಒಮ್ಮೆ ಸ್ವತಂತ್ರವಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದರು. ಯಾರು ಸಿಎಂ ಆಗಿರುತ್ತಾರೋ ಅವರೇ ಹೆಚ್ಚಿನ ಅನುದಾನ ತೆಗೆದುಕೊಂಡು ಹೋಗುತ್ತಾರೆ' ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶುಕ್ರವಾರ ಬಜೆಟ್ ಅಧಿವೇಶನದ ಕೊನೆಯದಿನ ವಿದಾಯ ಭಾಷಣ ಮಾಡಿದ ಅವರು, ಯಡಿಯೂರಪ್ಪ ಬಗ್ಗೆ ವೈಮನಸ್ಸು ಇರಬಹುದು. ಆದರೆ, ಅವರು ನಮ್ಮ ಪಕ್ಷದ ಹಿರಿಯರು, ರಾಜ್ಯದಲ್ಲಿ ಪಕ್ಷ ಕಟ್ಟಲು ಅನಂತ್‍ಕುಮಾರ್ ಹಾಗೂ ಯಡಿಯೂರಪ್ಪ ಕೃಷ್ಣ-ಅರ್ಜುನರ ರೀತಿಯಲ್ಲಿ ಶ್ರಮಿಸಿದ್ದಾರೆ. ನನಗೆ ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಲು ಅವಕಾಶ ಕಲ್ಪಿಸಿದರು. ಈ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಮುಖ್ಯಮಂತ್ರಿ, ಸಚಿವರು ಸಹಕಾರ ನೀಡಿದರು ಎಂದು ಅವರು ಹೇಳಿದರು.
ಇನ್ನೂ ಪಕ್ಷಾಂತರ ಪರ್ವ ಪ್ರಾರಂಭವಾಗುತ್ತದೆ. ಯಡಿಯೂರಪ್ಪ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದಾರೆ. ಆದರೆ, ನಮ್ಮಲ್ಲಿನ ಕೆಲವು ಹಿರಿಯರು ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ, ನನ್ನ ಮಗನನ್ನು ತಯಾರು ಮಾಡಿದ್ದೇನೆ ಎನ್ನುತ್ತಿದ್ದವರು, ಈಗ ಜನ ಒಪ್ಪುತ್ತಿಲ್ಲ, ನೀವೆ ನಿಲ್ಲಬೇಕೆಂದು ಬಯಸುತ್ತಿದ್ದಾರೆ ಎನ್ನುತ್ತಿದ್ದಾರೆ. ಕೆಲವರು ಸಾಯುವವರೆಗೂ ಶಾಸಕನಾಗೆ ಇರಬೇಕೆಂದು ಬಯಸಿದ್ದಾರೆ ಎಂದು ಅವರು ಟೀಕಿಸಿದರು.





