ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸದ ಪ್ರಮುಖ ಕುಸ್ತಿಪಟುಗಳು: ಕ್ರೀಡಾ ಸಚಿವಾಲಯ ಅಸಮಾಧಾನ
ಹೊಸದಿಲ್ಲಿ, ಫೆ.24: ಭಾರತದ ಕುಸ್ತಿ ಒಕ್ಕೂಟ ಹಾಗೂ ಅದರ ಅಧ್ಯಕ್ಷರೊಂದಿಗೆ ಈಗ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕುಸ್ತಿಪಟುಗಳು ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸದ್ಯಕ್ಕೆ ಭಾಗವಹಿಸುತ್ತಿಲ್ಲ. ಇದರಿಂದಾಗಿ ಕ್ರೀಡಾ ಸಚಿವಾಲಯವು ಕ್ರೀಡಾಪಟುಗಳ ಬಗ್ಗೆ ಅಸಮಾಧಾನಗೊಂಡಿದೆ. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ತನಿಖೆ ನಡೆಸಲು ಕ್ರೀಡಾ ಸಚಿವಾಲಯವು ಮೇಲುಸ್ತುವಾರಿ ಸಮಿತಿಯನ್ನು ರಚಿಸಿದೆ. ಇದೇ ವೇಳೆ ದೇಶದ ಅಗ್ರ ಕುಸ್ತಿಪಟುಗಳು ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಿಂದ ಹೊರಗುಳಿದಿದ್ದಾರೆ.
ಡಬ್ಲುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಅಧ್ಯಕ್ಷ ಸ್ಥಾನದಿಂದ ದೂರವುಳಿದು, ತನಿಖೆಯನ್ನು ಕಾಯ್ದಿರಿಸಿದ್ದರೂ ಕೂಡ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ರವಿ ದಹಿಯಾ, ದೀಪಕ್ ಪುನಿಯಾ, ಅನ್ಶು ಮಲಿಕ್ ಹಾಗೂ ಸಂಗೀತಾ ಮೊರ್ ಅವರಂತಹ ಪ್ರಮುಖ ಕುಸ್ತಿಪಟುಗಳು ಝಾಗ್ರೆಬ್‌ನಲ್ಲಿ ನಡೆಯುತ್ತಿರುವ ಯುಡಬ್ಲುಡಬ್ಲು ರ್ಯಾಂಕಿಂಗ್ ಸಿರೀಸ್ ಸ್ಪರ್ಧೆಗಳಿಂದ ಹೊರಗುಳಿದಿದ್ದಾರೆ.
ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ ಸ್ಕೀಮ್(ಟಾಪ್ಸ್)ಅಡಿ ಕುಸ್ತಿಪಟುಗಳಿಗೆ ತಯಾರಿ ಹಾಗೂ ತರಬೇತಿಗೆ ಆರ್ಥಿಕ ನೆರವು ನೀಡುತ್ತಿರುವ ಸರಕಾರವು ಕುಸ್ತಿಪಟುಗಳ ವರ್ತನೆಗೆ ಬೇಸರಗೊಂಡಿದೆ.
‘‘ಕುಸ್ತಿಪಟುಗಳ ಬೇಡಿಕೆ ಈಡೇರಿಸಿದ ಬಳಿಕವೂ ಅವರು ಸ್ಪರ್ಧೆಗಳಲ್ಲಿ ಭಾಗವಹಿಸದೇ ಇರುವುದು ಏಕೆಂದು ನಮಗೆ ಗೊತ್ತಿಲ್ಲ. ತನ್ನ ತನಿಖೆಯನ್ನು ಪೂರ್ಣಗೊಳಿಸಲು ಸಮಿತಿಗೆ ಸಮಯ ನೀಡಬೇಕಾದ ಅಗತ್ಯ ನಮಗಿದೆ. ಇದು ಕುಸ್ತಿಪಟುಗಳ ನಿರ್ಧಾರ. ನಾವು ಯಾರನ್ನೂ ಬಲವಂತಪಡಿಸಲಾರೆವು. ಆದರೆ ಅವರು ಸ್ಪರ್ಧೆಗಳನ್ನು ತಪ್ಪಿಸಿಕೊಳ್ಳಬಾರದು’’ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯ ರಾಷ್ಟ್ರೀಯ ಕುಸ್ತಿ ಒಕ್ಕೂಟದ ದೈನಂದಿನ ವ್ಯವಹಾರವನ್ನು ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ನೇತೃತ್ವದ ಆರು ಸದಸ್ಯರ ಮೇಲುಸ್ತುವಾರಿ ಸಮಿತಿ ನೋಡಿಕೊಳ್ಳುತ್ತಿದೆ.