ಕಳಪೆ ಫೀಲ್ಡಿಂಗ್: ಆಟಗಾರ್ತಿಯರನ್ನು ಟೀಕಿಸಿದ ಎಡುಲ್ಜಿ
ಮಹಿಳಾ ವಿಶ್ವಕಪ್ ಸೆಮಿ ಫೆನಲ್‌ನಲ್ಲಿ ಭಾರತಕ್ಕೆ ಸೋಲು

ಹೊಸದಿಲ್ಲಿ, ಫೆ.24: ಆಸ್ಟ್ರೇಲಿಯ ವಿರುದ್ಧ ಗುರುವಾರ ನಡೆದ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಭಾರತದ ಮಹಿಳಾ ತಂಡದ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣವಾಗಿದೆ. ಮೂರು ಬಾರಿ ಕ್ಯಾಚ್ ಕೈಚೆಲ್ಲಿದ್ದಲ್ಲದೆ, ಕನಿಷ್ಠ ಆರು ಬಾರಿ ಫೀಲ್ಡಿಂಗ್‌ನಲ್ಲಿ ತಪ್ಪೆಸಗಿದ ಹಿನ್ನೆಲೆಯಲ್ಲಿ 10-12 ಹೆಚ್ಚುವರಿ ರನ್ ನೀಡಿತ್ತು. ಹರ್ಮನ್‌ಪ್ರೀತ್ ಕೌರ್ ಬಳಗ ಗುರುವಾರ ಫೀಲ್ಡಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿತ್ತು. ಕಳಪೆ ಫೀಲ್ಡಿಂಗ್‌ನ್ನು ಉಲ್ಲೇಖಿಸಿ ಕೌರ್ ಬಳಗವನ್ನು ತರಾಟೆಗೆ ತೆಗೆದುಕೊಂಡ ಮಾಜಿ ನಾಯಕಿ ಡಯಾನ ಎಡುಲ್ಜಿ, ಅಂಡರ್-19 ಮಹಿಳಾ ತಂಡ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಅಭಿಯಾನದ ವೇಳೆ ಉತ್ತಮ ಫಿಟ್ನೆಸ್ ಜೊತೆಗೆ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದಿತ್ತು ಎಂದು ಬೆಟ್ಟು ಮಾಡಿದರು.
33 ತಿಂಗಳ ಕಾಲ ಬಿಸಿಸಿಐ ದೈನಂದಿನ ಚಟುವಟಿಕೆಯನ್ನು ನೋಡಿಕೊಂಡಿದ್ದ ಸುಪ್ರೀಂಕೋರ್ಟ್ ನಿಂದ ನೇಮಿಸಲ್ಪಟ್ಟಿರುವ ಸಮಿತಿಯ ಸದಸ್ಯರಾಗಿದ್ದ ಎಡುಲ್ಜಿ, ಸೀನಿಯರ್ ಮಹಿಳಾ ತಂಡದ ಫಿಟ್ನೆಸ್ ಮಾನದಂಡವನ್ನು ಟೀಕಿಸಿದರು. ತಂಡದ ಹೆಚ್ಚಿನ ಸದಸ್ಯರು ಯೋ ಯೋ ಟೆಸ್ಟ್ ಪಾಸ್ ಆಗಲು ಪರದಾಡುತ್ತಿದ್ದಾರೆ ಎಂದರು. ‘‘ಅಂಡರ್-19 ತಂಡವು ಹಿರಿಯ ತಂಡದ ಆಟಗಾರ್ತಿಯರಿಗಿಂತ ಹೆಚ್ಚು ಫಿಟ್ ಇದ್ದಂತೆ ನನಗೆ ಕಂಡುಬಂದಿದ್ದಾರೆ. ಅವರು ಫೈನಲ್‌ನಲ್ಲಿ ಎಡವಲಿಲ್ಲ. ಸೀನಿಯರ್ ತಂಡದ್ದು 2017ರಿಂದ 2023ರ ತನಕ ಅದೇ ಹಳೆಯ ಕಥೆ. ಆಟಗಾರ್ತಿಯರ ಫಿಟ್ನೆಸ್‌ನ್ನು ಬಿಸಿಸಿಐ ಸರಿಯಾಗಿ ವೌಲ್ಯ ಮಾಪನ ಮಾಡಬೇಕು ಎಂದು ಎಡುಲ್ಜಿ ಹೇಳಿದ್ದಾರೆ.







