ಸಿಂಧುರಿಂದ ಬೇರ್ಪಟ್ಟ ದ. ಕೊರಿಯಾದ ಕೋಚ್ ಸಾಂಗ್

ಹೊಸದಿಲ್ಲಿ, ಫೆ.24: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರಿಂದ ಬೇರ್ಪಟ್ಟಿದ್ದೇನೆ ಎಂದು ದಕ್ಷಿಣ ಕೊರಿಯಾದ ಕೋಚ್ ಪಾರ್ಕ್ ಟೇ ಸಾಂಗ್ ಅವರು ಶುಕ್ರವಾರ ದೃಢಪಡಿಸಿದರು.
2023ರ ಋತುವಿನ ನಿರಾಶಾದಾಯಕ ಆರಂಭದ ನಂತರ ಭಾರತದ ಶಟ್ಲರ್ ಬದಲಾವಣೆಯನ್ನು ಬಯಸಿದ್ದಾರೆ ಎಂದು ದೃಢಪಡಿಸುವುದರೊಂದಿಗೆ ಪಾರ್ಕ್ ಅವರು ಸಿಂಧು ಅವರೊಂದಿಗಿನ4 ವರ್ಷಗಳ ಕೋಚಿಂಗ್ ಬಾಂಧವ್ಯ ಕೊನೆಗೊಳಿಸಿದರು. ಪಾರ್ಕ್ ಅವರು ಸಿಂಧು ಅವರೊಂದಿಗೆ 2019ರ ವಿಶ್ವ ಚಾಂಪಿಯನ್‌ಶಿಪ್ ಬಳಿಕ ಕೆಲಸ ಮಾಡುತ್ತಿದ್ದಾರೆ. ಪಾರ್ಕ್ ಅವರು ಆರಂಭದಲ್ಲಿ ಭಾರತದ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಪುರುಷರ ಸಿಂಗಲ್ಸ್ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದರು. ಆದರೆ ಅವರು 2019ರಿಂದ ಸಿಂಧು ಅವರೊಂದಿಗೆ ಕೆಲಸ ಮಾಡಲು ಆರಂಭಿಸಿದರು.
ಪಾರ್ಕ್ ಮೇಲುಸ್ತುವಾರಿಯಲ್ಲಿ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಪಾದದ ಗಾಯದಿಂದಾಗಿ ಟೋಕಿಯೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್ ಸಹಿತ 2022ರ ದ್ವಿತೀಯಾರ್ಧದಲ್ಲಿ ಹಲವು ಸ್ಪರ್ಧೆಗಳಿಂದ ವಂಚಿತರಾಗಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ 2023ರ ಋತುವಿನಲ್ಲಿ ಸಾಧಾರಣ ಆರಂಭ ಪಡೆದರು. ಹೊಸ ಋತುವಿನಲ್ಲಿ 4 ಪಂದ್ಯಗಳಲ್ಲಿ ಸೋಲು ಹಾಗೂ ಎರಡರಲ್ಲಿ ಗೆಲುವು ಸಾಧಿಸಿದ್ದಾರೆ. ಮಲೇಶ್ಯ ಓಪನ್‌ನ ಮೊದಲ ಸುತ್ತಿನಲ್ಲಿ ಸಿಂಧು ಅವರು ಕರೊಲಿನಾ ಮರಿನ್‌ಗೆ ಸೋತಿದ್ದಾರೆ. ಜನವರಿಯಲ್ಲಿ ಇಂಡಿಯಾ ಓಪನ್‌ನಲ್ಲಿ ಕೆಳ ರ್ಯಾಂಕಿನ ಥಾಯ್ಲೆಂಡ್ ಆಟಗಾರ್ತಿ ಸುಪನಿದಾ ಕಟೆಥೊಂಗ್ ವಿರುದ್ಧ ಆಘಾತಕಾರಿ ಸೋಲುಂಡಿದ್ದರು.
ಸಿಂಧು ಅವರು ಬ್ಯಾಡ್ಮಿಂಟನ್ ಏಶ್ಯ ಮಿಕ್ಸೆಡ್ ಟೀಮ್ ಚಾಂಪಿಯನ್‌ಶಿಪ್‌ನ ಭಾರತ ತಂಡದ ಭಾಗವಾಗಿದ್ದರು. ಆದರೆ ಸ್ಟಾರ್ ಶಟ್ಲರ್ ಚೀನಾ ವಿರುದ್ಧ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.73ನೇ ಆಟಗಾರ್ತಿ ಗಾವೊ ಫಾಂಗ್ ಜೀ ಸೋತಿದ್ದರು. ರೌಂಡ್ ರಾಬಿನ್ ಹಂತದಲ್ಲಿ ಮಲೇಶ್ಯದ ವಾಂಗ್ ಲಿಂಗ್ ಚಿಂಗ್ ವಿರುದ್ಧ ಸೋತಿದ್ದರು.







