2020ರ ದಿಲ್ಲಿ ಗಲಭೆ: ಆ ತಾಯಿಯ ಕಣ್ಣೀರು ಇನ್ನೂ ಆರಿಲ್ಲ

ಮೂರು ವರ್ಷಗಳ ಕೆಳಗೆ 50 ಜನರನ್ನು ಬಲಿ ತೆಗೆದುಕೊಂಡಿದ್ದ ದಿಲ್ಲಿ ಗಲಭೆ, ಆ ನೆತ್ತರುಮಯ ಕ್ಷಣಗಳ ನೆನಪು ಬಹುಶಃ ಬಹಳಷ್ಟು ಮಂದಿಯ ಪಾಲಿಗೆ ಮಸುಕು ಮಸುಕು. ಆ ಗಲಭೆಗೆ ಕಾರಣರಾದವರು, ಪ್ರಚೋದಿಸಿದವರು, ಬೀದಿಗಿಳಿದು ಹಿಂಸಾಚಾರ ಮಾಡಿದವರು, ಅಮಾಯಕರನ್ನು ಕೊಂದವರು, ಸೊತ್ತು ಕಸಿದವರು ಎಲ್ಲರೂ ಈಗ ಅವರವರ ಲೋಕದಲ್ಲಿ ಮೈಮರೆತಿದ್ದಾರೆ. ಆದರೆ ಗಲಭೆಯಿಂದಾದ ಪ್ರಾಣ ಹಾನಿ, ನಾಶ ನಷ್ಟ, ಬಂಧನಗಳಿಂದಾಗಿ ನಿಜವಾಗಿ ಶಿಕ್ಷೆ ಅನುಭವಿಸಿದವರು ಅವರ ಮನೆಯ ಮಹಿಳೆಯರು. ಅವರು ಇಂದಿಗೂ ಹೇಗೆ ಆ ಗಲಭೆಗೆ ಬೆಲೆ ತೆರುತ್ತಿದ್ದಾರೆ ಎಂಬುದನ್ನು ‘ಇಂಡಿಯಾ ಟುಡೇ’ ತಂಡ ಒಂದು ವಿಶೇಷ ಸರಣಿ ಮೂಲಕ ಜನರ ಮುಂದಿಡುತ್ತಿದೆ.
ಅದರ ಮೊದಲ ಭಾಗ ಮಗ ಜೈಲಲ್ಲಿರುವ, ಸೊಸೆ ಅದೇ ಕೊರಗಲ್ಲಿ ಪ್ರಾಣ ಬಿಟ್ಟಿರುವ, ಸ್ವತಃ ಕ್ಯಾನ್ಸರ್ ಪೀಡಿತೆ ಲತಾ ಎಂಬ ಮಹಿಳೆಯ ಬಗ್ಗೆ. ಈ ಮಹಿಳೆಯ ಬದುಕು ಹೇಗೆ ಜರ್ಜರಿತಗೊಂಡಿದೆ ಎಂಬುದನ್ನು ಮೃದುಲಿಕಾ ಜಾ ಅವರು ವಿವರಿಸಿದ್ದನ್ನು ‘ವಾರ್ತಾಭಾರತಿ’ ನಿಮ್ಮ ಮುಂದಿಡುತ್ತಿದೆ.
ಭಗವತಿ ವಿಹಾರದ ಆ ಪುಟ್ಟ ಮನೆಯೊಳಗೆ 2020ರ ದಿಲ್ಲಿ ಹತ್ಯಾಕಾಂಡದ ಝಳವಿನ್ನೂ ಆರಿಲ್ಲ. ಅದು ವ್ಯಕ್ತವಾಗುತ್ತಿರುವುದು ಮಾತ್ರ ಕಣ್ಣೀರಾಗಿ.
ಕಳೆದ ಚುನಾವಣೆ ಹೊತ್ತಿನ ಭರವಸೆಗಳು, ಉದ್ಯೋಗದ, ಗುಪ್ತ ಕಾಯಿಲೆಗಳ, ದುರುಳ ಬಾಬಾಗಳ ನೂರೆಂಟು ಬಗೆಯ ಹರಿದ ಪೋಸ್ಟರುಗಳನ್ನು ಅಂಟಿಸಲಾದ ಗೋಡೆಗಳ ಹಿಂದೆ ಉಸಿರುಗಟ್ಟಿದಂತಿರುವ ಮನೆಗಳ ಸಾಲಲ್ಲಿ ಅದೊಂದು ಪುಟ್ಟ ಮನೆ. ಅಲ್ಲಿರುವ ಆ ತಾಯಿಯ ಹೆಸರು ಲತಾ.
ಕ್ಯಾನ್ಸರ್ ಕಾಯಿಲೆಯ ಸಂಕಟದಲ್ಲೂ, ಆಕೆಯ ಮನಸ್ಸಿನ ತುಂಬ ಜೈಲಿನಲ್ಲಿರುವ ಮಗನದೇ ಚಿಂತೆ, ಸತ್ತುಹೋಗಿರುವ ಸೊಸೆಯದೇ ನೆನಪು. ಅವರಿಬ್ಬರ ಕುಡಿಗಳಾದ ಮೂರು ಪುಟ್ಟ ಪುಟ್ಟ ಕಂದಮ್ಮಗಳ ಪಾಲನೆಯ ಹೊಣೆ ಹೆಗಲ ಮೇಲಿದೆ. ಮೊಮ್ಮಕ್ಕಳ ಜೊತೆ ಆಟವಾಡಿಕೊಂಡು ಮೊಣಕಾಲಿಗೆ ಎಣ್ಣೆ ಹಚ್ಚಿ ನೀವಿಕೊಳ್ಳುತ್ತ, ಬಿಸಿಲಿಗೆ ಒಡ್ಡಿಕೊಂಡು ಹಾಯಾಗಿರಬೇಕಿದ್ದ ವಯಸ್ಸಿನಲ್ಲಿ ಆ ಮೂರು ಮಕ್ಕಳನ್ನು ದಡ ಮುಟ್ಟಿಸುವ ಕಡುಚಿಂತೆಯಲ್ಲಿ ಮುಳುಗಿ ಬೇಯುವಂತಾಗಿದೆ. ಯಾರೋ ಕೆಲವರ ಪಾಲಿನ ಆಟವಾದ ಗಲಭೆ, ಏನೆಂದರೆ ಏನೂ ಮಾಡಿರದ ಈ ಅಮಾಯಕ ಜೀವಗಳನ್ನು ಹಿಂಡುತ್ತಿರುವ ಕಥೆ ಯಾರಿಗೂ ಲೆಕ್ಕಕ್ಕಿಲ್ಲ.
ಒಂದು ಮಗು ಆಸೆಯಿಂದ ಚೋಲೆ ಭಟುರೆ ಕೇಳುತ್ತದೆ. ಮತ್ತೊಂದಕ್ಕೆ ಹಾಲು ಬೇಕು. ಮಗದೊಂದು, ಆಟಿಕೆಗಾಗಿ ಕಣ್ಣರಳಿಸುತ್ತದೆ. ಅದಾವುದನ್ನೂ ಪೂರೈಸಲಾರದ ಸಂಕಟಕ್ಕೆ ಆ ತಾಯಿಯ ಮನಸ್ಸು ಒಡೆದುಹೋಗುತ್ತದೆ. ದಾಳಿಂಬೆ ತಿನ್ನಬೇಕೆಂದು ವೈದ್ಯರು ಹೇಳಿದ್ದಾರೆ. ತನಗೆ ಆಲೂಗಡ್ಡೆ ಕೊಳ್ಳುವ ಶಕ್ತಿಯೂ ಇಲ್ಲವೆಂಬುದು ಅವರಿಗೇನು ಗೊತ್ತು ಎಂದು ನೆನೆಯುವಾಗ ಆ ಸಂಕಟ ಇನ್ನಷ್ಟಾಗುತ್ತದೆ.
ಮನೆಯ ಜಗಲಿಯಲ್ಲಿ ಪೇಪರುಗಳನ್ನು ಹರಡಿಕೊಂಡು ಲಕೋಟೆ ಮಾಡುತ್ತ, ಅದನ್ನು ಮಾರಿದ ಹಣದಲ್ಲೇ ಬದುಕು ಸಾಗಬೇಕಿದೆ. ಜೈಲಿನಲ್ಲಿರುವ ಮಗ ಯಾವಾಗ ಬರುವನೋ ಎಂಬ ಪ್ರಶ್ನೆಯೊಂದಿಗೇ ಮೂರು ವರ್ಷಗಳು ಮುಗಿದಿವೆ.
2020ರ ಮಾರ್ಚ್. ಅದೊಂದು ಬೆಳಗ್ಗೆ ಮನೆಗೆ ಪೊಲೀಸರು ಬರುತ್ತಾರೆ. ವಿಚಾರಣೆಗೆ ಎಂದು ಆವತ್ತು ಅವರು ಕರೆದುಕೊಂಡು ಹೋದ ಮಗ ಮತ್ತೆ ಮರಳಿಲ್ಲ. ನಡುವೆಯೊಮ್ಮೆ ಬಂದಿದ್ದು ಅವನ ಹೆಂಡತಿಯ ಚಿತೆಗೆ ಕೊಳ್ಳಿಯಿಡುವುದಕ್ಕೆ. ತಾಯಿಯಿಲ್ಲದೆ, ತಂದೆಯೂ ದೂರವಾಗಿರುವ ಕಂದಮ್ಮಗಳ ನಡುವೆ ಎದೆಯುರಿಸಿಕೊಳ್ಳುತ್ತ ಬದುಕಿದ್ದಾರೆ ಲತಾ.
ಗಲಭೆ ನಡೆದ ದಿನಗಳು ನೆನಪಾಗುತ್ತವೆ. ಚಾಂದಿನಿ ಚೌಕ್ನ ಸೀರೆಯಂಗಡಿಯಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತಿದ್ದ ಮಗ ಅವತ್ತು ರಾತ್ರಿಯಾದರೂ ಮನೆಗೆ ಬರಲಿಲ್ಲ. ಗಾಬರಿಯಿಂದ ಫೋನ್ ಮಾಡಿದರೆ, ‘‘ಹೇಗೆ ಬರಲಿ, ಎಲ್ಲಾ ರಸ್ತೆಗಳನ್ನೂ ಮುಚ್ಚಿದ್ದಾರೆ. ಹೊರಗೆ ಹೋದರೆ ಗುಂಡು ಹಾರಿಸುತ್ತಾರೆ’’ ಎಂದು ಆರಡಿಯ ನನ್ನ ಮಗ ಸಣ್ಣ ಮಗುವಿನಂತೆ ಫೋನಿನಲ್ಲೇ ಅಳುತ್ತಿದ್ದ ಎಂದು ನೆನೆಯುತ್ತಾರೆ ಆ ತಾಯಿ. ಕಡೆಗೂ ಮಗ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿಹೋಗಿತ್ತು. ಆಗ ಚಿಲಕ ತೆರೆದು, ಮತ್ತೆ ಮುಚ್ಚಿದ ಬಾಗಿಲನ್ನು ಪುನಃ ತೆರೆದದ್ದು ಎರಡು ದಿನಗಳ ನಂತರವೇ.
ರಸ್ತೆಯಲ್ಲಿ ನಿತ್ಯ ಗಲಾಟೆ. ಕೆಲವೊಮ್ಮೆ ಗುಂಡಿನ ಸದ್ದು, ಕೆಲವೊಮ್ಮೆ ಘೋಷಣೆಗಳ ಕೂಗು ಕೇಳಿಬರುತ್ತಿತ್ತು. ತಳ್ಳಿದರೆ ಬಿದ್ದುಹೋಗುವಂತಿದ್ದ ಮನೆಬಾಗಿಲನ್ನು ಹಾಸಿಗೆ ಅಡ್ಡವಿಟ್ಟು ಭದ್ರಪಡಿಸಿಕೊಂಡು, ಟಿವಿ ಹಾಕದೆ, ದೀಪಗಳನ್ನೂ ಆರಿಸಿ, ಜೀವ ಕೈಯಲ್ಲಿ ಹಿಡಿದುಕೊಂಡಂತೆ ಕೂತು ಕಳೆದಿದ್ದರು. ಭಯದಲ್ಲಿ ಒಂದು ತುಣುಕು ರೊಟ್ಟಿಯೂ ಗಂಟಲಲ್ಲಿ ಇಳಿದಿರಲಿಲ್ಲ.
ಹೇಗೋ ದಿನಗಳು ಉರುಳಿದವು. ನಂತರ, ಎಲ್ಲವೂ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ಮರಳಿತು. ಮಗನೂ ಮತ್ತೆ ಕೆಲಸಕ್ಕೆ ಹೋಗಲು ಶುರು ಮಾಡಿದ್ದ. ಅಂಥ ಒಂದು ದಿನವೇ ಪೊಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು. ರಸ್ತೆಯಲ್ಲಿ ನಡೆದ ಒಂಭತ್ತು ಕೊಲೆಗಳ ಆರೋಪ ಮನೆಯೊಳಗಿದ್ದವನ ಮೇಲೆ ಅದು ಹೇಗೆ ಬಂತೆಂಬುದೇ ಬಗೆಹರಿದಿಲ್ಲ ಅವರಿಗೆ. ಕೊರಗುತ್ತ ಕಣ್ಣೀರು ಹರಿಸುತ್ತಾರೆ ಆ ತಾಯಿ.
ಮಗನನ್ನು ಪೊಲೀಸರು ಬಂದು ಕರೆದುಕೊಂಡುಹೋದ ದಿನ ಮನೆಯಲ್ಲಿ ತಾನು ಮತ್ತು ಸೊಸೆ ರೊಟ್ಟಿ ತಟ್ಟಿದ್ದ ನೆನಪು. ಅವನು ಬಂದಾನು ಎಂದೇ ನಿರೀಕ್ಷೆ ಇಟ್ಟುಕೊಂಡವರ ಕಣ್ಣಲ್ಲಿ ಆತಂಕ ಶುರುವಾಗಿದ್ದು ರಾತ್ರಿ ಅವನು ಬಾರದೇ ಉಳಿದಾಗ. ಮಾರನೇ ದಿನವೂ ಮುಗಿದುಹೋಗುತ್ತದೆ. ನಂತರ ಮೂರು ದಿನಗಳೇ ಕಳೆಯುತ್ತವೆ. ಅದಾದ ಬಳಿಕ ಆಸೆಯೇ ಇಲ್ಲವಾಗುತ್ತದೆ. ರೊಟ್ಟಿಯೂ ಹಳಸುತ್ತದೆ.
ಗ್ರಾಹಕರನ್ನು ಮೋಡಿ ಮಾಡಬಲ್ಲಂಥ ದನಿಯಿತ್ತು ಮಗನಿಗೆ, ಮಾಲಕರೂ ವಿಶ್ವಾಸವಿಟ್ಟಿದ್ದರು. ಕೆಲವೊಮ್ಮೆ ಹಣ ಕೊಟ್ಟು ಸೂರತ್ಗೆ ಕಳುಹಿಸುತ್ತಿದ್ದರು. ‘‘ಯಾರ ಅಸೂಯೆಯ ಶಾಪ ಅವನನ್ನು ನುಂಗಿತೋ’’ ಎಂದು ನೋಯುತ್ತಾರೆ ಲತಾ.
ಲಕೋಟೆಗಳ ಕಟ್ಟು ಮಾರಿಬರಲು ಮಾರುಕಟ್ಟೆಗೆ ಹೋದಾಗೊಮ್ಮೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೆನೆಯುವ ಲತಾ, ಅದಾದ ನಂತರ ಹಿರಿಯ ಮೊಮ್ಮಗಳು, ‘‘ಅಮ್ಮಾ, ಹೋಗಬೇಡಿ, ನೀವು ಮತ್ತೆ ಬೀಳುತ್ತೀರಿ’’ ಎನ್ನುತ್ತಾಳೆ. ಆದರೆ ಆ 8 ವರ್ಷದ ಮಗುವನ್ನು ಅಷ್ಟು ದೊಡ್ಡ ಮಾರುಕಟ್ಟೆಗೆ ಒಂಟಿಯಾಗಿ ಹೋಗಲು ಬಿಡುವುದಾದರೂ ಹೇಗೆ ಎಂಬ ಅಸಹಾಯಕತೆ.
ಮಗ ಜೈಲುಪಾಲಾದ ಬಳಿಕ ತನಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ‘‘ಮೊದಲು ತನ್ನ ಗಂಡನ ಬಗ್ಗೆ ಅಳುತ್ತಿದ್ದ ಸೊಸೆ, ನನ್ನ ಕ್ಯಾನ್ಸರ್ ಪತ್ತೆಯಾದಾಗ ರಾತ್ರಿಯಿಡೀ ಅಳುತ್ತಿದ್ದಳು. ಅಮ್ಮಾ ನೀನೂ ನಮ್ಮನ್ನ ಬಿಟ್ಟುಹೋಗ್ತೀಯಾ? ಎಂದು ಕೇಳುತ್ತಿದ್ದಳು. ಆದರೆ ಒಮ್ಮೆ ಜ್ವರ ಬಂದು 10 ದಿನಗಳಲ್ಲೇ ಅವಳೇ ಹೊರಟುಹೋಗಿಬಿಟ್ಟಳು. ಅವಳ ಚಿತೆಗೆ ಕೊಳ್ಳಿಯಿಡಲು ಬಂದಿದ್ದ ಮಗ, ಚಿನ್ನದಂಥ ಹೆಂಡತಿಯನ್ನು ನಿನ್ನ ಬಳಿ ಬಿಟ್ಟುಹೋಗಿದ್ದೆ, ನೀನು ಮಣ್ಣು ಮಾಡಿಬಿಟ್ಟೆ ಎಂದು ಕಿರುಚಾಡಿದ. ನಾನಾದರೂ ಏನು ಹೇಳುವಂತಿತ್ತು?..’’ ಲತಾ ಮನಸ್ಸಿನೊಳಗಿನ ಸಂಕಟ, ಕಣ್ಣೀರಿಗೆ ಕೊನೆಯೇ ಇಲ್ಲ.
ಮಗ ಎಂದು ಬರುವನೋ ಎಂಬ ಪ್ರಶ್ನೆ, ಸೊಸೆಯ ಸಾವು, ಮಕ್ಕಳ ಹಸಿವು, ತನ್ನ ಕ್ಯಾನ್ಸರ್ ಇವೆಲ್ಲದರ ಭಾರವಿಟ್ಟುಕೊಂಡೇ ಆಕೆ ಮಗನಿಗಾಗಿ ಕಾಯುತ್ತಿದ್ದಾರೆ. ಮಗ ಮರಳದ ಹೊರತು ಸಾಯಲಾರೆ ಎಂಬ ಹೊಣೆ ಹೊತ್ತವರಂತೆ, ಹಠ ತೊಟ್ಟವರಂತೆ.
ಗಲಭೆಯಾದಾಗಿನಿಂದ ಟಿವಿಯವರು, ಪೇಪರಿನವರು ಅದೆಷ್ಟೋ ಜನ ಮನೆಗೆ ಬಂದುಹೋಗಿದ್ದಾರೆ. ತಮ್ಮ ಬಗ್ಗೆ ಬರೆದಿದ್ದಾರೆ. ಅವರು ಬರೆಯುವುದರಿಂದ ತಮಗೇನಾದರೂ ಸಹಾಯವಾದೀತೆ? ಲತಾ ಕಣ್ಣಲ್ಲಿ ಪ್ರಶ್ನೆಯಿದೆ.
ಲತಾ ಅವರ ಕಥೆ, ಗಲಭೆಯ ನಂತರ ಮಗ್ಗಲು ಬದಲಿಸಿಕೊಂಡು ಸಾಗಿರುವ ದಿಲ್ಲಿಯ ಅದೆಷ್ಟೋ ಇಂಥದ್ದೇ ಕಥೆಗಳಲ್ಲಿ ಒಂದು. ಅವರ ನೋವಿನ, ಅವರ ನಿರೀಕ್ಷೆಯ ಪ್ರಶ್ನೆ ಸಣ್ಣದಲ್ಲ. ಅದಕ್ಕಿಂತಲೂ, ಒಂದು ತತ್ತು ಅನ್ನವನ್ನು ನಿರ್ಲಕ್ಷ್ಯದಿಂದ ಎಸೆಯುವಾಗ ನಾವು ನೆನಪಿಡಬೇಕಿರುವುದು, ಆ ಭಗವತಿ ವಿಹಾರದ ಪುಟ್ಟ ಮನೆಯೊಳಗೆ ಹಸಿದ ಕಂದಮ್ಮಗಳಿವೆ, ಒಂದು ದಿನವಾದರೂ ತನ್ನ ತಟ್ಟೆಯೊಳಗೆ ಚೋಲೆ ಭಟುರೆ ಇರುವುದೇ ಎಂದು ಆಸೆಯಿಂದ ಕಾದಿರುವ ಮಗುವಿದೆ ಎಂಬುದನ್ನು.
ಆ ಕಂದಮ್ಮಗಳ ಹೊಟ್ಟೆ ತಣ್ಣಗಿರಲಿ. ಅವರನ್ನು ಕಾಯುತ್ತಿರುವ ಅ ತಾಯಿಯ ಕೈಯ ಕಸುವು ಬತ್ತದಿರಲಿ. ಬಹುಬೇಗ ಆ ಮಕ್ಕಳು ಬೆಳೆದು ಜೀವನದ ದಡ ಮುಟ್ಟುವಂತಾಗಲಿ.
ಕೃಪೆ. indiatoday.in







