ಸಂವಿಧಾನ ಅಳಿವು ಉಳಿವಿನ ‘ಯಕ್ಷಪ್ರಶ್ನೆ’ಗೆ ಉತ್ತರವಾಗುವ ಚುನಾವಣೆ

ಕೇವಲ ರಾಜ್ಯ ಬಿಜೆಪಿಗಷ್ಟೇ ಕರ್ನಾಟಕದಲ್ಲಿ ಪಕ್ಷದ ಗೆಲುವು ಅನಿವಾರ್ಯವಲ್ಲ. ಉತ್ತರದಲ್ಲಿ ಆಧಿಪತ್ಯ ಸ್ಥಾಪಿಸಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನೆಲೆ ಇರುವುದು ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ. ಕರ್ನಾಟಕ 2023ರಲ್ಲಿ ಕೈತಪ್ಪಿದರೆ, ಬಿಜೆಪಿಗೆ ಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿನ ಗೆಲುವು ಕಷ್ಟವಾಗಬಹುದೆಂಬ ಆತಂಕದಿಂದ ಮೋದಿ-ಶಾ ಜೋಡಿ, ಕರ್ನಾಟಕದ ಬಿಜೆಪಿ ನಾಯಕರನ್ನು ನಂಬದೆ ತಾವೇ ರಣರಂಗಕ್ಕೆ ಇಳಿಯುವಂತೆ ತೋರುತ್ತಿದೆ. ಆದರೆ ಕೊನೆಗೂ ಎಲ್ಲರೂ ನಂಬಬೇಕಾದ್ದು ಕರ್ನಾಟಕದ ‘ಪ್ರಜ್ಞಾವಂತ’, ಮತದಾರರನ್ನಲ್ಲವೇ?
ದೇಶದ ಸಂವಿಧಾನದ ಬಗ್ಗೆ ಯಾವುದೇ ಗೌರವವಿಲ್ಲದೆ, ಸಂವಿಧಾನವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲು ಮಾಡಲು ಸತತ ಪ್ರಯತ್ನ ನಡೆಸುತ್ತಿರುವ ಕೇಂದ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ, ಸಂವಿಧಾನದ ಆಶಯಗಳನ್ನು ನಾಶ ಮಾಡಲು ಸತತ ಹಾಗೂ ತೀವ್ರ ಪ್ರಯತ್ನ ನಡೆಸುತ್ತಿದೆ.
ವಕ್ರ ದೃಷ್ಟಿಯ ರಾಷ್ಟ್ರೀಯವಾದ ಹಾಗೂ ಕಟು ಹಿಂದುತ್ವದ ಬೆಂಬಲದಿಂದ ಪಡೆದುಕೊಂಡಿರುವ ರಾಜಕೀಯ ಶಕ್ತಿಯನ್ನು ಸಂವಿಧಾನದ ಅಂತರಾತ್ಮವನ್ನು ನಾಶಮಾಡುವುದಕ್ಕಷ್ಟೇ ಅಲ್ಲದೆ, ಜನಪರ, ಜನತಂತ್ರ ಪರವಾದ ಪ್ರಶ್ನೆಗಳನ್ನು ಎತ್ತಬೇಕಿರುವ ವಿರೋಧ ಪಕ್ಷವನ್ನು ನಿರ್ನಾಮ ಮಾಡುವುದನ್ನೇ ಗುರಿಯಾಗಿಸಿಕೊಂಡು, ತನ್ನ ಅರಾಜಕ ಆಡಳಿತವನ್ನು ನಡೆಸುವ ಹಾದಿಯನ್ನು ಸುಗಮವಾಗಿಸಿಕೊಂಡಿದೆ. ಭಾರೀ ಬಹುಮತದ ಪರಿಣಾಮವಿದು. ಸಂಸತ್ನಲ್ಲಿ ಪ್ರಶ್ನಾತೀತವಾಗಿ ದೇಶದ ಬಹುತ್ವ ಸಂಸ್ಕೃತಿಗೆ ಧಕ್ಕೆ ತಂದು ಬಹುಸಂಖ್ಯಾತರ ಬೆಂಬಲವಿದೆ ಎಂಬ ನೆಪದಡಿಯಲ್ಲಿ ಬಿಜೆಪಿ ತನ್ನ ಸುತ್ತ ಉಕ್ಕಿನ ಕೋಟೆಯನ್ನು ನಿರ್ಮಿಸಿಕೊಂಡು, ಪ್ರಶ್ನಿಸುವ ಎಲ್ಲರನ್ನೂ ತುಳಿಯುವ ಸತತ ಪ್ರಯತ್ನ ನಡೆಸುತ್ತಿದೆ. ಜನತಂತ್ರ ವ್ಯವಸ್ಥೆಯನ್ನು ರಕ್ಷಿಸಲು ಬಿಜೆಪಿಯ ಪ್ರತಿಯೊಂದು ಸಂವಿಧಾನ ವಿರೋಧಿ ಕ್ರಿಯೆಗೂ, ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟುವಂತಾಗಿದೆ.
ತುಂಬಲಾಗದ ಉಪಸಭಾಪತಿ ಹುದ್ದೆ
ಪ್ರಸಕ್ತ ಲೋಕಸಭೆ ಹಾಗೂ ಐದು ವಿಧಾನ ಸಭೆಗಳಲ್ಲಿ ಇದುವರೆಗೂ ಉಪಸಭಾಪತಿ ಹುದ್ದೆ ತುಂಬದೆ ‘ಕಾರಣಾಂತರ’ದಿಂದ ಸ್ಥಾನವನ್ನು ಖಾಲಿ ಇಟ್ಟುಕೊಂಡಿರುವುದೇ ಇದಕ್ಕೆ ನಿದರ್ಶನ. ಬಿಜೆಪಿ ಸರಕಾರದ ಈ ರೀತಿಯ ಧೊರಣೆ, ಸಂವಿಧಾನದ ಕಲಂ 93 ಹಾಗೂ 178ರ ಆಶಯಗಳಿಗೆ ವಿರುದ್ಧವಾದುದು ಎಂದು ಕೆಲವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ನೀಡಿ, ಕಾರಣ ನೀಡಬೇಕೆಂದು ಕೇಳಿದೆ. ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಸರಕಾರದ ಪರವಾಗಿ ದೇಶದ ಅತಿ ಪ್ರಮುಖ ವಿವಾದಗಳಲ್ಲಿ ತೀರ್ಪು ನೀಡಿದವರು ‘ಫಲಾನುಭವಿ’ಗಳಾಗುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಕೇಳಿಬರುತ್ತಿರುವ ಆರ್ತನಾದ ‘‘ನ್ಯಾಯ ಎಲ್ಲಿದೆ?’’ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ. ‘‘ಬಗ್ಗಿ ಎಂದರೆ ತೆವಳಲು ಸಿದ್ಧ’’ ಎನ್ನುತ್ತಿರುವ ಮಾಧ್ಯಮ ವ್ಯವಸ್ಥೆಯಲ್ಲಿ. ಪ್ರಶ್ನಿಸುವವರನ್ನು ದಂಡಿಸಲಾಗುತ್ತಿದೆ. ಅವರಿಗೆ ‘ದೇಶವಿರೋಧಿ’ ಪಟ್ಟ ಕಟ್ಟಲಾಗುತ್ತಿದೆ. ಇದಕ್ಕೆ ಇತ್ತೀಚೆಗೆ ‘ಬಿಬಿಸಿ’ ಮಾಧ್ಯಮ ಸಂಸ್ಥೆಯ ಮೇಲೆ ಆದಾಯ ಕರ ಇಲಾಖೆ ನಡೆಸಿದ ‘ಸರ್ವೇ’ ಎಂಬ ಹೆಸರಿನ ದಾಳಿ ಸಾಕ್ಷಿ.
ಬಹು ಅಶ್ವಶಕ್ತಿಯ ದ್ವಿ-ಇಂಜಿನ್ ಸರಕಾರ
ಕೇಂದ್ರದಲ್ಲಿ ಪರಿಸ್ಥಿತಿ ಹೀಗಾದರೆ, ‘‘ದ್ವಿ- ಇಂಜಿನ್’ನ ಬಹು ‘ಅಶ್ವ’ ಶಕ್ತಿಯನ್ನೇ ನಂಬಿಕೊಂಡಿರುವ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕರ್ನಾಟಕದ (ಈ ದ್ವಿ ಇಂಜಿನ್) ‘ಉಪ ಇಂಜಿನ್’ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡು ಪಾಶವೀ ಶಕ್ತಿಯನ್ನು ಅವಲಂಬಿಸಿ ವಿರೋಧಿಗಳನ್ನು ಹಣಿಯಲು ಸಜ್ಜಾಗಿದೆ. ಹಾಗಾಗಿ ಬಹುಸಂಖ್ಯಾತರ ಭಾವುಕತೆಯನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳಲು ಹಿಂಜರಿಯುತ್ತಿಲ್ಲ. ಸಾವರ್ಕರ್-ಟಿಪ್ಪು ಅಂಥ ಅರ್ಥಹೀನ, ಆದರೆ ಭಾವನೆಗಳನ್ನು ಕೆರಳಿಸುವ ಕಥನ(ನರೇಟೀವ್)ಗಳನ್ನು ಹುಟ್ಟುಹಾಕುತ್ತಿದೆ. ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣವನ್ನು ಘೋಷಿಸಿದೆ. ಈ ಮಂದಿರಕ್ಕೆ ಸರಕಾರದ ಬೊಕ್ಕಸದ ಹಣವನ್ನು ವೆಚ್ಚಮಾಡಲು ಸಜ್ಜಾಗಿದೆ. ಫೆಬ್ರುವರಿ 17ರಂದು ಮಂಡಿಸಲಾದ ಆಯವ್ಯಯದಲ್ಲಿ ಹಣವನ್ನು ಕೂಡ ಮೀಸಲಿಟ್ಟು, ತನ್ನ ಎಂದಿನ ಹಿಂದುತ್ವದ ಪತಾಕೆಯನ್ನು ಹಾರಿಸಿದೆ. ಚುನಾವಣೆಯಲ್ಲಿ ನೇರ ಮಾರ್ಗದಲ್ಲಿ ಗೆಲುವು ಅಸಾಧ್ಯವೆಂದು ಅರಿವಾಗಿರುವ ಹಿನ್ನೆಲೆಯಲ್ಲಿ, ಹಿಂದುತ್ವ ಹಾಗೂ ಸಂವಿಧಾನ ವಿರೋಧಿ ರಾಷ್ಟ್ರೀಯವಾದವನ್ನು ಮುಂದುಮಾಡಿ ಮತದಾರರಿಗೆ ಮಂಕುಬೂದಿ ಎರಚಲು ಸಿದ್ಧತೆ ನಡೆಸಿದೆ.
ಮೋದಿ-ಶಾ ದಂಡಯಾತ್ರೆ
ಪಕ್ಷ ಹಾಗೂ ಸರಕಾರದ ಯಾತ್ರೆಗಳಿಗೆ ಜನರು ಗೈರಾಗುತ್ತಿರುವುದನ್ನು ಗಮನಿಸಿ ಪಕ್ಷದ ಸರ್ವೋಚ್ಚ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬಲಗೈ ಎನ್ನಿಸಿಕೊಂಡಿರುವ ಚುನಾವಣಾ ಚಾಣಕ್ಯ, ಗೃಹ ಸಚಿವ ಅಮಿತ್ ಶಾ ಅವರ ವರ್ಚಸ್ಸಿನ ಮೇಲೆ ಮತ ಬೇಟೆಯಾಡಲು ಸಜ್ಜಾಗಿದೆ. ಕಳೆದ ಬಾರಿ ಚುನಾವಣೆಗೂ ಮುನ್ನ 21 ಬಾರಿ ಕರ್ನಾಟಕದ ದಂಡಯಾತ್ರೆ ನಡೆಸಿದರೂ, ಬಹುಮತ ತಂದುಕೊಡುವಲ್ಲಿ ವಿಫಲರಾದ ಮೋದಿ ಈ ಬಾರಿ 25 ಬಾರಿ ಕರ್ನಾಟಕಕ್ಕೆ ಬಂದು, ಸೋತು ಸೊರಗಿರುವ ಆಡಳಿತ ಪಕ್ಷಕ್ಕೆ ಶಕ್ತಿ ತುಂಬುತ್ತಾರೆಂಬ ಭರವಸೆಯನ್ನು ರಾಜ್ಯ ಬಿಜೆಪಿ ಹೊಂದಿದೆ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಅವರ ನಿಜ ಹೋರಾಟವನ್ನು ಮರೆಮಾಡಿ, ಅವರ ಸುತ್ತಲಿನ ಪ್ರಾಂತೀಯ ಭಾವುಕತೆಯ ಲಾಭ ಪಡೆಯಲು ನಿರಂತರ ಪ್ರಯತ್ನ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಅಷ್ಟೇ ಅಲ್ಲ, ಸಾಂಸ್ಕೃತಿಕ ರಂಗದ ಖ್ಯಾತರನ್ನು ಪಕ್ಷದತ್ತ ಸೆಳೆಯಲು ಮೋದಿ ತಮ್ಮ ಇತ್ತೀಚಿನ ಬೆಂಗಳೂರು ಭೇಟಿ ಸಂದರ್ಭದಲ್ಲಿ, ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ, ಕೆಜಿಎಫ್ 1-2 ಖ್ಯಾತಿಯ ಯಶ್, ಈ ಎರಡೂ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು (ಇವರು ವಿವಾದಾತ್ಮಕ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಸಂಬಂಧಿಯೂ ಹೌದು) ಅವರನ್ನು ಭೇಟಿಮಾಡಿದ್ದಾರೆ.
ಹಳೆಯ ಮೈಸೂರು ಭಾಗದಲ್ಲಿ ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸ್ ಪಾರಮ್ಯ ಮುರಿಯಲು ಬಿಜೆಪಿ ಸಾಮ, ದಾನ ಭೇದ, ದಂಡದಂಥ ಎಲ್ಲ ಅಸ್ತ್ರಗಳನ್ನು ಬಳಸಲು ಸಜ್ಜಾಗಿದೆ. ‘‘ಆ ಭಾಗದ ಬಲಿಷ್ಠ ಒಕ್ಕಲಿಗ ನಾಯಕರನ್ನು ಅವರು ಯಾವುದೇ ಪಕ್ಷದಲ್ಲಿರಲಿ, ಹೇಗಾದರೂ ಸರಿ ಕರೆ ತನ್ನಿ. ಆಲ್ಲಿ ನಮ್ಮವರ ವಿರೋಧವನ್ನು ಲೆಕ್ಕಿಸಬೇಡಿ. ಅವರನ್ನು ನಿರ್ವಹಿಸುವ ಜವಾಬ್ದಾರಿ ನಮಗೆ ಬಿಡಿ’’ ಎಂದು ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದಾಗ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಹರ ಕೊಲ್ಲಲ್ ಪರ ಕಾಯ್ವನೇ?
ವಿರೋಧ ಪಕ್ಷವನ್ನೇ ಒಂದರ ವಿರುದ್ಧ ಒಂದನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ತನ್ನೆಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ ಎಂದು ಅರಿವಾದಾಗ ತನ್ನ ಎಂದಿನ ಆಕ್ರಮಣಕಾರಿ ದಾಳ ಉರುಳಿಸಲು ಸಜ್ಜಾಗಿದೆ. ಆಕ್ರಮಣಕಾರಿ ಎಂದರೆ ಯಾವ ಮಟ್ಟದಲ್ಲಿ? ವಿರೋಧ ಪಕ್ಷದ ನಾಯಕರೊಬ್ಬರನ್ನು ‘ಟಿಪ್ಪು’ವನ್ನು ಮುಗಿಸಿದಂತೆ ಮುಗಿಸಿ ಎಂದು ಪಕ್ಷದ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮಂಡ್ಯದಲ್ಲಿ ಕರೆನೀಡಿದ್ದು ಬಿಜೆಪಿಯ ಹತಾಶೆಯನ್ನು ತೋರಿಸುತ್ತಿದೆ. ಪಕ್ಷಕ್ಕೆ ಭೂಗತ ಜಗತ್ತಿನ ‘ದೊರೆ’ಗಳನ್ನು ಸೇರಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಹೆದರಿಸಿ ಬೆದರಿಸಿ ಮತ ಗಿಟ್ಟಿಸಲು ಪ್ರಯತ್ನ ನಡೆಸಿರುವುದು ಜಗಜ್ಜಾಹಿರಾಗಿರುವಾಗಲೇ, ಸರಕಾರದ ಸಚಿವರೊಬ್ಬರು ಈ ರೀತಿಯ ಕರೆ ನೀಡಿರುವುದನ್ನು ಗಮನಿಸಿದರೆ, 2023ರ ವಿಧಾನಸಭಾ ಚುನಾವಣೆ ರಕ್ತ ಸಿಕ್ತವಾಗುವುದೇನೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ‘‘ಹರ ಕೊಲ್ಲಲ್ ಪರ ಕಾಯ್ವನೇ?’’ ಎಂದು ಮತದಾರರು ಪ್ರಶ್ನಿಸುವಂತೆ ಮಾಡಿದೆ. ಜಾರಿ ನಿರ್ದೇಶನಾಲಯ, ಆದಾಯ ಕರ ಇಲಾಖೆ, ಸಿಬಿಐ ಮುಂತಾದ ಕೇಂದ್ರದ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿ, ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ರನ್ನು ಮಣಿಸಲು ಯತ್ನಿಸಿ ವಿಫಲವಾಗಿರುವ ಬಿಜೆಪಿ ನಾಯಕರು, ಕಾಂಗ್ರೆಸ್ನ ಮುಖ್ಯ ಶಕ್ತಿಯಾದ ಸಿದ್ದರಾಮಯ್ಯನವರನ್ನು ಮಣಿಸಲು ಕಸರತ್ತು ಮಾಡಿ, ಸಿದ್ದರಾಮಯ್ಯನವರ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಂಗಾಲಾಗಿ ‘ಅವರನ್ನು ಮುಗಿಸಿ’ ಎಂದು ಕರೆನೀಡುವ ಮಟ್ಟಕ್ಕೆ ತಲುಪಿರುವುದು ನಿಜಕ್ಕೂ ವಿಷಾದನೀಯ.
ಕಳೆದ ಮೂರು ವರ್ಷಗಳ ಹಿಂದೆ, ಹಣ ಬಲ, ಜಾತಿ ಬಲದಿಂದ ಕಾಂಗ್ರೆಸ್ ಹಾಗೂ ಜನತಾದಳದ ಶಾಸಕರನ್ನು ವಾಮಮಾರ್ಗದಿಂದ ಸೆಳೆದು ಅಧಿಕಾರಕ್ಕೆ ಬಂದ ನಂತರ ಮುಂದಿನ ಚುನಾವಣೆಯಲ್ಲಿ ನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸದೆ, ಅನ್ಯ ಮಾರ್ಗ ಹಿಡಿದು, ಭ್ರಷ್ಟಾಚಾರದಿಂದ ಹಣಗಳಿಸಿ, ಶೇ 40 ಕಮೀಷನ್ ಪಡೆದು, ಇನ್ನಿಂಥ ಭ್ರಷ್ಟ ಸರಕಾರ ಬರಲಾರದು ಎಂಬಂಥ ವಾತಾವರಣ ನಿರ್ಮಾಣ ಮಾಡಿಕೊಂಡು ಜನರ ಬಳಿಗೆ ಹೋಗುವುದೇ ಕಷ್ಟ ಎನ್ನುವಂತಾಗಿದೆ. ರೈತರು, ಕಾರ್ಮಿಕರು, ಸರಕಾರಿ ನೌಕರರು, ಎಲ್ಲರನ್ನೂ ದಂಡ ಪ್ರಯೋಗದಿಂದ ನಿಯಂತ್ರಿಸಿ, ಅವರನ್ನು ಈಗ ರಮಿಸುವ ಕೆಲಸಕ್ಕೆ ಕೈಹಾಕಿದೆ. ಬೆಳಗಾವಿಯ ಬಿಜೆಪಿ ನಾಯಕರೊಬ್ಬರು. ‘‘ನಾವು ಪ್ರತೀ ಮತದಾರನಿಗೆ ಆರು ಸಾವಿರ ರೂಪಾಯಿ ಕೊಡದಿದ್ದರೆ, ಬಿಜೆಪಿಗೆ ಮತಹಾಕಬೇಡಿ’’ ಎಂದು ಕರೆನೀಡುವ ಮಟ್ಟಕ್ಕೆ ಸ್ಥಿತಿ ತಲುಪಿದೆ. ‘‘ಮತದಾರರು ಮೋದಿ ಅವರನ್ನು ನೋಡಿ ಮತಹಾಕಬೇಕೆ ಹೊರತು, ರಾಜ್ಯದ ಯಾವ ಬಿಜೆಪಿ ನಾಯಕನಿಗೂ, ತನ್ನ ಸ್ವಂತ ಶಕ್ತಿಯ ಮೇಲೆ ಮತಗಳಿಸುವ ಶಕ್ತಿ ಇಲ್ಲ’’ ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಹಾಗಾಗಿಯೇ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆ ನಡೆಸುವುದು ಸಂಘ ಪರಿವಾರದ್ದೇ ತಂತ್ರವಾಗಿದೆ.
ಕೇವಲ ರಾಜ್ಯ ಬಿಜೆಪಿಗಷ್ಟೇ ಕರ್ನಾಟಕದಲ್ಲಿ ಪಕ್ಷದ ಗೆಲುವು ಅನಿವಾರ್ಯವಲ್ಲ. ಉತ್ತರದಲ್ಲಿ ಆಧಿಪತ್ಯ ಸ್ಥಾಪಿಸಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನೆಲೆ ಇರುವುದು ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ. ಕರ್ನಾಟಕ 2023ರಲ್ಲಿ ಕೈತಪ್ಪಿದರೆ, ಬಿಜೆಪಿಗೆ ಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿನ ಗೆಲುವು ಕಷ್ಟವಾಗಬಹುದೆಂಬ ಆತಂಕದಿಂದ ಮೋದಿ-ಶಾ ಜೋಡಿ, ಕರ್ನಾಟಕದ ಬಿಜೆಪಿ ನಾಯಕರನ್ನು ನಂಬದೆ ತಾವೇ ರಣರಂಗಕ್ಕೆ ಇಳಿಯುವಂತೆ ತೋರುತ್ತಿದೆ. ಆದರೆ ಕೊನೆಗೂ ಎಲ್ಲರೂ ನಂಬಬೇಕಾದ್ದು ಕರ್ನಾಟಕದ ‘ಪ್ರಜ್ಞಾವಂತ’, ಮತದಾರರನ್ನಲ್ಲವೇ.







