ರಕ್ಷಣಾ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ: ಡಿಆರ್‌ಡಿಒ ಅಧಿಕಾರಿಯನ್ನು ಬಂಧಿಸಿದ ಒಡಿಶಾ ಪೊಲೀಸರು

ಭುವನೇಶ್ವರ: ಡಿಆರ್‌ಡಿಒ (DRDO) ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರನ್ನು ರಕ್ಷಣಾ ಇಲಾಖೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದಲ್ಲಿ ಒಡಿಶಾ ಪೊಲೀಸರು ಬಂಧಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಆರೋಪಿ ಅಧಿಕಾರಿ ಚಂಡೀಪುರದಲ್ಲಿರುವ ಐಟಿಆರ್ ಕೇಂದ್ರದಲ್ಲಿ ನಡೆಯುತ್ತಿದ್ದ ಡಿಆರ್‌ಡಿಒ ಹಾಗೂ ಇತರ ರಕ್ಷಣಾ ಸಂಸ್ಥೆಗಳ ಬಹುತೇಕ ಕ್ಷಿಪಣಿ ಹಾಗೂ ಬಾಂಬ್‌ಗಳ ಪರೀಕ್ಷಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಾಕಿಸ್ತಾನ ಪ್ರಜೆಯೊಬ್ಬಳಿಂದ ಲೈಂಗಿಕ ಆಮಿಷಕ್ಕೆ ಒಳಗಾಗಿ ಹಾಗೂ ಹಣಕಾಸು ಪಡೆದು ಸೂಕ್ಷ್ಮ ರಕ್ಷಣಾ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಈ ಹಿರಿಯ ತಾಂತ್ರಿಕ ಅಧಿಕಾರಿಯನ್ನು ಬಾಲಸೋರ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿ ವರದಿ ಪ್ರಕಾರ, ಆರೋಪಿ ಅಧಿಕಾರಿಯನ್ನು ಬಾಲಸೋರ್ ಜಿಲ್ಲೆಯ ಜಲೇಶ್ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗ್ಪುಂಜಿ ಗ್ರಾಮದ ನಿವಾಸಿ ಬಾಬುರಾಂ ದುಬೆ (51) ಎಂದು ಗುರುತಿಸಲಾಗಿದೆ. ಅವರು ಚಂಡೀಪುರದ ಐಟಿಆರ್ ಕೇಂದ್ರದ ದೂರದರ್ಶಕ ವಿಭಾಗದಲ್ಲಿ ಸಿ ದರ್ಜೆಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಡಿಆರ್‌ಡಿಒ ಸಿಬ್ಬಂದಿ ಹಾಗೂ ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಿದ್ದರು ಮತ್ತು ಕ್ಷಿಪಣಿ ಉಡಾವಣೆ ಕುರಿತ ಸೂಕ್ಷ್ಮ ತಾಂತ್ರಿಕ ಮಾಹಿತಿಗಳ ತಿಳಿವಳಿಕೆ ಹೊಂದಿದ್ದರು. ಇದಲ್ಲದೆ, ಕ್ಷಿಪಣಿ ಉಡಾವಣೆಯ ಕುರಿತು ಮುಂಚಿತವಾಗಿಯೇ ಮಾಹಿತಿ ಹೊಂದಿರುತ್ತಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಸೋರ್ ಪೊಲೀಸ್ ವರಿಷ್ಠಾಧಿಕಾರಿ ಸಾಗರಿಕಾ ನಾಥ್, ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಆರೋಪದಲ್ಲಿ ಐವರು ಐಟಿಆರ್ ಕೇಂದ್ರದ ಉದ್ಯೋಗಿಗಳ ಬಂಧನವಾದ ನಂತರ ಕೆಲವು ನಿರ್ದಿಷ್ಟ ವ್ಯಕ್ತಿಗಳ ಚಲನವಲನದ ಮೇಲೆ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ವಹಿಸಿವೆ ಎಂದು ತಿಳಿಸಿದ್ದಾರೆ.
"ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ತನಿಖೆ ಪ್ರಗತಿಯಲ್ಲಿದೆ. ಸೂಕ್ಷ್ಮ ಮಾಹಿತಿಗಳ ಹಸ್ತಾಂತರದ ಕುರಿತು ನಮಗೆ ಬಲವಾದ ಸಾಕ್ಷ್ಯಾಧಾರಗಳು ದೊರೆತ ನಂತರ ಕೆಲವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದೇವೆ" ಎಂದು ಹೇಳಿದ್ದಾರೆ.
ಹನಿ ಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಯುವತಿಯರ ಸ್ಥಳವು ಪಾಕಿಸ್ತಾನದ ರಾವಲ್ಪಿಂಡಿ ಎಂಬ ಸಂಗತಿ ತಿಳಿದು ಬಂದಿದೆ ಎಂದು ಹೇಳಿರುವ ಪೊಲೀಸ್ ಮಹಾ ನಿರೀಕ್ಷಕ ಹಿಮಾಂಶು ಲಾಲ್, "ಯುವತಿಯನ್ನು ಹನಿಟ್ರ್ಯಾಪ್‌ಗೆ ಬಳಸುವ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಬಿಎಸ್ಪಿ ಶಾಸಕನ ಹತ್ಯೆ ಪ್ರಕರಣದ ಮುಖ್ಯ ಸಾಕ್ಷಿಯ ಗುಂಡಿಕ್ಕಿ ಹತ್ಯೆ







