ಮಾದಕ ವಸ್ತು ಸೇವಿಸಬಾರದು, ಸಾರ್ವಜನಿಕವಾಗಿ ಪಕ್ಷವನ್ನು ಟೀಕಿಸಬಾರದು: ಕಾಂಗ್ರೆಸ್ ಸದಸ್ಯರಿಗೆ ನೂತನ ನೀತಿ ಸಂಹಿತೆ

ಹೊಸದಿಲ್ಲಿ: ಛತ್ತೀಸ್‌ಗಢದ ರಾಯ್ಪುರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಮಹಾಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರು ಮಾದಕ ದ್ರವ್ಯ ಸೇವನೆ ಮಾಡಕೂಡದು ಹಾಗೂ ಪಕ್ಷವನ್ನು ಸಾರ್ವಜನಿಕವಾಗಿ ಟೀಕಿಸಕೂಡದು ಎಂಬ ನಿಯಮಗಳನ್ನು ಪಕ್ಷದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ndtv.com ವರದಿ ಮಾಡಿದೆ.
ಇದಲ್ಲದೆ ಪಕ್ಷದ ಸದಸ್ಯರು ಸ್ವಯಂಸೇವೆ ಹಾಗೂ ಸಾಮುದಾಯಿಕ ಸೇವೆ ಮಾಡಲೂ ನಿಯಮಗಳನ್ನು ರೂಪಿಸಲಾಗಿದ್ದು, ಅವರು ಯಾವುದೇ ಹೀನ ಅಪರಾಧಗಳಲ್ಲಿ ದೋಷಿಯಾಗಿರಬಾರದು ಎಂದೂ ಹೇಳಲಾಗಿದೆ. ಕಾಂಗ್ರೆಸ್ ಸಂವಿಧಾನಕ್ಕೆ ತಂದಿರುವ ತಿದ್ದುಪಡಿಯಲ್ಲಿ, "ಆತ/ಆಕೆ ಮಾದಕ ವಸ್ತುಗಳು, ನಿಷೇಧಿತ ಔಷಧಗಳು ಹಾಗೂ ಮದ್ಯ ಸೇವನೆಯಿಂದ ದೂರ ಇರಬೇಕು" ಎಂದು ಸೇರಿಸಲಾಗಿದೆ.
"ಆತ/ಆಕೆ ಶ್ರಮದಾನದಂತಹ, ಮುಖ್ಯವಾಗಿ ಅವಕಾಶ ವಂಚಿತ ಹಾಗೂ ಬಡ ವರ್ಗಗಳಿಗಾಗಿ ಸಾರ್ವಜನಿಕ ಸಂಪತ್ತು ಸೃಷ್ಟಿಸುವ ಗುರಿ ಹಾಗೂ ಯೋಜನೆಗಳನ್ನು ಕೈಗೊಳ್ಳಬೇಕು ಮತ್ತು ಪಾಲ್ಗೊಳ್ಳಬೇಕು ಮತ್ತು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸೌಹಾರ್ದತೆಗಾಗಿ ದುಡಿಯುವ ನಡತೆ ಹೊಂದಿರಬೇಕು" ಎಂದೂ ಹೇಳಿದೆ.
ಶುಕ್ರವಾರ ಆರಂಭವಾಗಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನದಲ್ಲಿ ಸುಮಾರು 15,000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಇತರ ವಿರೋಧ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಸೇರಿದಂತೆ 2024ರ ಲೋಕಸಭಾ ಚುನಾವಣೆಗಾಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.







