ಕಣಚೂರು ಆಸ್ಪತ್ರೆಯಲ್ಲಿ ಆರ್ಥೊಸ್ಕ್ಯಾನ್ -2023 ಗೆ ಚಾಲನೆ

ಕೊಣಾಜೆ: ಅಂತರಶಿಸ್ತಿನ ವಿಧಾನ, ನಗು, ಉತ್ತಮವಾದ ಮಾತುಗಳನ್ನು ರೋಗಿಗಳೆದುರು ಪ್ರಸ್ತುಪಡಿಸುವ ತರಬೇತಿ ಯುವವೈದ್ಯರಿಗೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಿಂದ ದೊರೆಯಬೇಕಿದೆ ಎಂದು ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆರ್ಥೊಪೆಡಿಕ್ಸ್ ವಿಭಾಗದ ಆಶ್ರಯದಲ್ಲಿ ಲೆಕ್ಚರ್ ಹಾಲ್ ನಲ್ಲಿ ಆಯೋಜಿಸಲಾದ ಆರ್ಥೊಸ್ಕ್ಯಾನ್ -2023 ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿದರು.
ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ರೋಗಿಗಳ ಜೊತೆಗಿನ ಒಡನಾಟ ಉತ್ತಮವಾಗಿದ್ದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕಲ್ಪಿಸಬೇಕಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಆರ್ಥಪೆಡಿಕ್ ವಿಭಾಗ ಮನುಕುಲದಲ್ಲಿ ಹೊಸ ಇತಿಹಾಸವನ್ನು ಸಾಧಿಸಿದೆ. ಜಾಯಿಂಟ್ ರಿಪ್ಲೇಸ್ ಮೆಂಟ್, ಸ್ಟೆಮ್ ಸೆಲ್ ಥೆರಪಿ, ರೊಬೋಟಿಕ್ ಸರ್ಜರಿಯಂತಹ ನೂತನ ತಂತ್ರಜ್ಞಾನದ ಆವಿಷ್ಕಾರಗಳು ನಡೆದಿವೆ. ತರಬೇತುದಾರರು ನಾವೀನ್ಯತೆಯ ಜ್ಞಾನವನ್ನು ಪಡೆಯದೇ ಇದ್ದಲ್ಲಿ ಹಿಂದೆ ಉಳಿಯುವ ಸ್ಥಿತಿಯಿದೆ. ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ವಿವಿಧ ವಿಭಾಗಗಳ ನಡುವೆ ಪರಸ್ಪರ ಸಂಬಂಧವಿಲ್ಲದೆ ಕ್ಷೇತ್ರದಲ್ಲಿ ಮುಂದುವರಿಯುವಂತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ವೈದ್ಯ ವಿಜ್ಞಾನ ಸಂಸ್ಥೆ ನಿರ್ದೇಶಕ ಅಬ್ದುಲ್ ರಹಿಮಾನ್ ವಹಿಸಿ ಮಾತನಾಡಿ ಜನ ತೊಂದರೆಯನ್ನಿಟ್ಟುಕೊಂಡು ವೈದ್ಯರಲ್ಲಿಗೆ ಬರುತ್ತಾರೆ. ಅವರಲ್ಲಿ ಮಾನವೀಯತೆಯನ್ನು ತೋರಿಸಿ , ಉತ್ತಮವಾದ ಮಾತುಗಳಿಂದ ಗುಣಪಡಿಸುವ ಮನಸ್ಥಿತಿಯನ್ನು ಯುವವೈದ್ಯರು ಬೆಳೆಸಿಕೊಳ್ಳಬೇಕು. ಇಂತಹ ಹೆಜ್ಜೆಯಿಂದ ಡಾ| ಶಾಂತಾರಾಮ ಶೆಟ್ಟಿಯವರು ಮನೆ ಮಾತಾಗಿದ್ದಾರೆ ಎಂದರು.
ಕಣಚೂರು ವೈದ್ಯಕೀಯ ಕಾಲೇಜು ಡೀನ್ ಡಾ| ಕೆ.ಜಿ ಕಿರಣ್, ಕಣಚೂರು ಸಂಸ್ಥೆ ಸಲಹಾ ಸಮಿತಿಯ ಸದಸ್ಯ ಡಾ. ಮೊಹಮ್ಮದ್ ಇಸ್ಮಾಯಿಲ್ , ಸಹ ವೈದ್ಯಕೀಯ ಅಧೀಕ್ಷಕ ಡಾ| ಶಹನವಾಝ್, ಕಣಚೂರು ಆರೋಗ್ಯ ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ಮುಖ್ಯ ಅತಿಥಿಗಳಾಗಿದ್ದರು.
ಡಾ.ಕೆ.ಸಲಾವುದ್ದೀನ್ ಆರೀಫ್ ಸ್ವಾಗತಿಸಿದರು. ಡಾ| ಜಲಾಲುದ್ದೀನ್ ಎಂ.ವಿ ನಿರೂಪಿಸಿದರು. ಡಾ| ಅವಿನಾಶ್ ಕುಮಾರ್ ವಂದಿಸಿದರು.







