ಒಂದೇ ದಿನ 6 ಸಾವಿರ ಕೋಟಿ ರೂ.ಮೊತ್ತದ 1,830 ಟೆಂಡರ್ ಕರೆದ ರಾಜ್ಯ ಬಿಜೆಪಿ ಸರಕಾರ: ಆಪ್ ಆರೋಪ
''ಚುನಾವಣೆಗಾಗಿ ಜನರ ತೆರಿಗೆ ಹಣ ಲೂಟಿ''

ಬೆಂಗಳೂರು, ಫೆ. 25: ರಾಜ್ಯ ಸರಕಾರವು ಕೇವಲ 24 ಗಂಟೆಗಳ ಅಂತರದಲ್ಲಿ 1,830 ಟೆಂಡರ್ ಗಳಿಗೆ ಆಹ್ವಾನ ನೀಡಿ ಕೆಲವೇ ದಿನಗಳ ಕಾಲಾವಕಾಶ ನೀಡಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಈ ಸಂಬಂಧ 462 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಫೆ.24ರ ಮುಂಜಾನೆ 2.30ರಿಂದ ಫೆ.25ರ ಮುಂಜಾನೆ 2.30ರ ನಡುವೆ ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಒಟ್ಟು 15ರಿಂದ 20ಸಾವಿರ ಕೋಟಿ ರೂ. ಮೊತ್ತದ ವಿವಿಧ ಟೆಂಡರ್ ಗಳನ್ನು ಕರೆಯಲಾಗಿದೆ ಎಂಬ ಮಾಹಿತಿಯಿದ್ದು, ಪ್ರಸ್ತುತ ನಮಗೆ 6 ಸಾವಿರ ಕೋಟಿ ರೂ.ಮೊತ್ತದ ಟೆಂಡರ್ ಗಳ ಮಾಹಿತಿ ಮಾತ್ರ ಸಿಕ್ಕಿದೆ ಎಂದರು.
ಅಮಿತ್ ಶಾರವರು ಕರ್ನಾಟಕಕ್ಕೆ ಬಂದು, ಬಿಜೆಪಿಯು ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತದೆ ಎಂದು ಹೇಳಿದ್ದಾರೆ. ಶೇ.40 ಕಮಿಷನ್ ಆಡಳಿತದ ಬದಲು ಶೇ.100 ಕಮಿಷನ್ ಆಡಳಿತ ಬರುತ್ತದೆ ಎಂದು ಹೇಳುವ ಬದಲು ಅವರು ಹಾಗೆ ಹೇಳಿರಬಹುದು ಎಂದು ವ್ಯಂಗ್ಯ ಮಾಡಿದರು.
ರಾಜ್ಯಾದ್ಯಂತ ಸೀರೆ, ಕುಕ್ಕರ್, ಚಿನ್ನ, ಬೆಳ್ಳಿ, ಟಿವಿ ಮುಂತಾದವುಗಳನ್ನು ಮತದಾರರಿಗೆ ಹಂಚುತ್ತಿರುವುದಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಎಎಪಿ ದಾಖಲೆಸಹಿತ ಬಹಿರಂಗಪಡಿಸುತ್ತಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಅಲ್ಪಾವಧಿ ಟೆಂಡರ್‍ಗಳನ್ನು ಕರೆಯಲಾಗುತ್ತದೆ. ಆದರೆ ಈಗ ಅಂತಹ ಯಾವುದೇ ಸನ್ನಿವೇಶ ಇಲ್ಲದಿದ್ದರೂ ಚುನಾವಣೆಗಾಗಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಅವರು ಆರೋಪಿಸಿದರು.
ಎಎಪಿ ಮುಖಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಒಂದು ಲಕ್ಷ ಮನೆಗಳಿಗೆ ನೀರು ಪೂರೈಸುವ 2000 ಕೋಟಿ ರೂ. ಮೊತ್ತದ 456 ಟೆಂಡರ್‍ಗಳನ್ನು ಕರೆಯಲಾಗಿದೆ. ಇಂಧನ ಇಲಾಖೆ ವಸತಿ ಕಟ್ಟಡಗಳ ಕಾಂಪೌಂಡ್ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಗಳಲ್ಲಿ 4 ಕೋಟಿ, 5 ಕೋಟಿ ರೂ. ಮೊತ್ತ ಇದೆ ಎಂದರು.
ಕೆಪಿಟಿಸಿಎಲ್‍ನಲ್ಲಿ ಮಹೀಂದ್ರ ಬೊಲೆರೊ ವಾಹನಗಳಿಗೆ ಅಂದಾಜು ಮೊತ್ತವನ್ನೇ ನಮೂದಿಸದೇ ಮೂರು ಸಲ ಟೆಂಡರ್ ಕರೆದಿದ್ದಾರೆ. ಅರಣ್ಯ ಇಲಾಖೆಯ ಎಲ್ಲ ಟೆಂಡರ್‍ಗಳನ್ನು ಕೂಡ ಏಕಕಾಲಕ್ಕೆ ಕರೆಯಲಾಗಿದೆ. ಈ ಎಲ್ಲ ಟೆಂಡರ್ ಗಳು ಕೇವಲ 7ರಿಂದ 15 ದಿನಗಳ ಅಲ್ಪಾವಧಿ ಟೆಂಡರ್ ಗಳಾಗಿವೆ. ಅಮಿತ್ ಶಾಗೆ ತಾಕತ್ತಿದ್ದರೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿ ಈ ಎಲ್ಲ ಟೆಂಡರ್‍ಗಳನ್ನು ರದ್ದುಪಡಿಸಲಿ ಎಂದು ಎಂದು ಸವಾಲು ಹಾಕಿದರು.
