ಬಜ್ಪೆ: ಪಶು ಚಿಕಿತ್ಸಾಲಯ ಉದ್ಘಾಟನೆ

ಮಂಗಳೂರು, ಫೆ.25: ಆರ್‌ಐಡಿಎಫ್-24ರಡಿ 40 ಲಕ್ಷ ರೂ. ವೆಚ್ಚದಲ್ಲಿ ಬಜ್ಪೆಯಲ್ಲಿ ನಿರ್ಮಿಸಲಾದ ಪಶು ವೈದ್ಯಕೀಯ ಸಂಸ್ಥೆಯ ನೂತನ ಕಟ್ಟಡವನ್ನು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯ ಸರಕಾರ ಕೃಷಿ ಹಾಗೂ ಹೈನುಗಾರಿಕೆಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಈಗ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ. ಇಲ್ಲಿ ಕೇವಲ ಇಬ್ಬರು ವೈದ್ಯರು ಮತ್ತು ಇಬ್ಬರು ಸಿಬ್ಬಂದಿಯಿದ್ದಾರೆ. ದೂರುಗಳು ಬಾರದ ರೀತಿಯಲ್ಲಿ ಜನಪರ ಕೆಲಸಗಳನ್ನು ಮಾಡಬೇಕಿದೆ. ದೊಡ್ಡ ವ್ಯಾಪ್ತಿಯ ಈ ಕೇಂದ್ರಕ್ಕೆ ಇನ್ನೂ ಕೆಲವು ಸಿಬ್ಬಂದಿಯ ಅಗತ್ಯವಿದೆ. ರಾಜ್ಯದ ಪಶು ಚಿಕಿತ್ಸಾಲಯಗಳಲ್ಲಿರುವ ವೈದ್ಯರ ಕೊರತೆ ಬಗ್ಗೆ ಈಗಾಗಲೇ ಸರಕಾರದ ಗಮನಸೆಳೆಯಲಾಗಿದೆ. ಸುಮಾರು 1,000 ಪಶು ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ದ.ಕ.ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಈ ಕೇಂದ್ರ ವ್ಯಾಪ್ತಿಯಲ್ಲಿ ಬಜ್ಪೆಪಟ್ಟಣ ಪಂಚಾಯತ್, ಪಡುಪೆರಾರ, ಎಕ್ಕಾರು, ಕಂದಾವರ, ಪೆರ್ಮುದೆ ವ್ಯಾಪ್ತಿಯ ಕೆಲವು ಗ್ರಾಮಗಳು ಒಳಗೊಂಡಿದೆ. ಸುಮಾರು 4,6000ಕ್ಕೂ ಅಧಿಕ ಪಶುಗಳಿವೆ. ಕೇಂದ್ರದಿಂದ ಚಿಕಿತ್ಸೆ, ಲಸಿಕೆ ಮತ್ತು ಸಾಮಾಜಿಕ-ಆರ್ಥಿಕ ಸೇವೆ ನಡೆಯುತ್ತಿದೆ ಎಂದರು.
ಪೆರ್ಮುದೆ ಗ್ರಾಪಂ ಅಧ್ಯಕ್ಷ ಪ್ರಸಾದ್ ಅಂಚನ್, ಪಡುಪೆರಾರ ಗ್ರಾಪಂ ಅಧ್ಯಕ್ಷೆ ಅಮಿತಾ ಎಂ. ಶೆಟ್ಟಿ, ಬಜ್ಪೆಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ಮತ್ತಿತರರು ಉಪಸ್ಥಿತರಿದ್ದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ. ಅಶೋಕ್ ಕೆ. ಆರ್., ಸ್ವಾಗತಿಸಿ, ವಂದಿಸಿದರು.